ಪೈಪ್‌ಲೈನ್‌ಗೆ ಕೊಳಚೆ ನೀರು ಸೇರ್ಪಡೆ

ಮಲ್ಲಾಪುರ ಮುಖ್ಯರಸ್ತೆಯಲ್ಲಿ ಪೈಪ್ ಒಡೆದು ರಸ್ತೆ ಬದಿ ನೀರು ನಿಂತಿರುವುದು.
ಮಲ್ಲಾಪುರ ಮುಖ್ಯರಸ್ತೆಯಲ್ಲಿ ಪೈಪ್ ಒಡೆದು ರಸ್ತೆ ಬದಿ ನೀರು ನಿಂತಿರುವುದು.
Published on
ಹೊಳೆಹೊನ್ನೂರು: ಸಮೀಪದ ಮಲ್ಲಾಪುರದ ಸಂತೆ ಮೈದಾನದ ಬಳಿ ಓವರ್‌ಹೆಡ್ ಟ್ಯಾಂಕ್‌ಗೆ ನೀರು ಸರಬರಾಜು ಮಾಡುವ ಪೈಪ್ ಒಡೆದು ಕುಡಿಯುವ ನೀರಿನೊಂದಿಗೆ ಚರಂಡಿ ತ್ಯಾಜ್ಯ ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು.
ಪೈಪ್‌ಲೈನ್ ದುರಸ್ತಿಗೊಳಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷೃ ತೋರುತ್ತಿದ್ದಾರೆಂದು ನಿವಾಸಿಗಳು ಆರೋಪಿಸಿ ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬದಿ ಮುಖ್ಯ ಪೈಪ್‌ಲೈನ್ ಒಡೆದು ತಿಂಗಳುಗಳೇ ಕಳೆದಿದೆ. ಪೈಪ್ ದುರಸ್ತಿಗೆ ಗ್ರಾಪಂ ಮೀನಮೇಷ ಎಣಿಸುತ್ತಿದೆ. ಗ್ರಾಪಂ ನಿರ್ಲಕ್ಷೃದಿಂದ ನಿವಾಸಿಗಳಿಗೆ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. ಮೈದೊಳಲಿನಲ್ಲಿ ಹಿಂದೆ ಕಲುಷಿತ ನೀರು ಸೇವಿಸಿ 7 ಜನ ಬಲಿಯಾಗಿದ್ದರು. ಗ್ರಾಪಂ ವ್ಯಾಪ್ತಿಯಲ್ಲಿ ಪದೇ ಪದೇ ನೀರಿನಿಂದ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿದ್ದರೂ  ಗ್ರಾಪಂ ಎಚ್ಚೆತ್ತುಕೊಳ್ಳುತ್ತಿಲ್ಲ. 
ಮಲ್ಲಾಪುರದ ಸಂತೆ ಮೈದಾನದ ಬಳಿಯ ಕಾಲುವೆ ಹೊಂದಿಕೊಂಡಂತಿರುವ ಪೈಪ್‌ಲೈನ್ ಒಡೆದು  ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಸೇರ್ಪಡೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ಸೇರಿ ಹಲವರು ಅನೇಕ ಬಾರಿ ಮೈದೊಳಲು ಪಿಡಿಒಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಂತೆ ಮೈದಾನದ ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗದ ಚರಂಡಿಗಳಲ್ಲಿ ನೀರು ನಿಂತು ವಾಸನೆ ಬರುತ್ತಿದೆ. ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ. 
 ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಪೈಪ್‌ಲೈನ್ ಒಡೆದಿರುವುದರಿಂದ ಬೈಕ್ ಸವಾರರು ಕೆಸರಿನಲ್ಲಿ ಬಿದ್ದು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net