ಬಾಂಧವ್ಯ ಬೆಸೆದ ವಿಶಾಲ ಗದ್ದೆ

ಬೈಸೆ ಗ್ರಾಮದ ವಿಶಾಲವಾದ ಗದ್ದೆಯಲ್ಲಿ ಭತ್ತ ಕೊಯ್ಲು ಮಾಡಿ ಹೊರೆ ಹೊತ್ತು ಸಾಗುತ್ತಿರುವ ಕೃಷಿಕರು.
ಬೈಸೆ ಗ್ರಾಮದ ವಿಶಾಲವಾದ ಗದ್ದೆಯಲ್ಲಿ ಭತ್ತ ಕೊಯ್ಲು ಮಾಡಿ ಹೊರೆ ಹೊತ್ತು ಸಾಗುತ್ತಿರುವ ಕೃಷಿಕರು.
Published on
ಹೊಸನಗರ: ಮಲೆನಾಡಿನಲ್ಲಿ ಒಂದು ಭತ್ತದ ಗದ್ದೆ ಹೆಚ್ಚೆಂದರೆ ಅರ್ಧ ಎಕರೆ ಹೊಂದಿದ್ದರೆ ಅದು ಹೆಚ್ಚು. ಅದರಲ್ಲೂ ಕಂಪದ ಗದ್ದೆಯ ಸಾಲಿನಲ್ಲಿ ದೊಡ್ಡ ಗದ್ದೆಗಳು ಸಿಗೋದೆ ಇಲ್ಲ. ಆದರೆ ಇಲ್ಲೊಂದು ಗದ್ದೆ ಬರೋಬ್ಬರಿ ಒಂದೂವರೆ ಎಕರೆ ವಿಸ್ತೀರ್ಣ ಹೊಂದಿದ್ದು ಗಮನ ಸೆಳೆದಿದೆ. ಹೌದು. ಮಲೆನಾಡ ನಡುಮನೆ ಎಂದೇ ಬಿಂಬಿತವಾಗಿರುವ ಹೊಸನಗರ ತಾಲೂಕಿನ ಬೈಸೆ ಗ್ರಾಮದಲ್ಲಿ ಅಂತಹ ಒಂದು ಭತ್ತದ ಗದ್ದೆ ಕಂಡು ಬಂದಿದೆ. 70 ವರ್ಷಕ್ಕೂ ಹಿಂದಿನಿಂದ ಈ ಗದ್ದೆಯಲ್ಲಿ ಭತ್ತದ ಕೃಷಿ ಮಾಡಿಕೊಂಡು ಬರಲಾಗುತ್ತಿದೆ. ಈ ವಿಶಾಲ ಗದ್ದೆ ಗ್ರಾಮಸ್ಥರ ಗಮನ ಸೆಳೆದಿದೆ. ಬೈಸೆ ಗ್ರಾಮದ ರವಿ ಭಟ್‌ಗೆ ಸೇರಿದ ಈ ವಿಶಾಲವಾದ ಗದ್ದೆಯ ನಾಟಿ, ಕೊಯ್ಲು ಬಂತೆಂದರೆ ಸಾಕು ಇಡೀ ಗ್ರಾಮದ ರೈತರ ಹಾಜರಾತಿ ಗ್ಯಾರಂಟಿ. ಮತ್ತೆ ನಾಟಿಯ ಸಮಯದಲ್ಲಿ ಸಸಿಗಳ ಬೀಡು ಹಚ್ಚಹಸುರಿನ ವಾತಾವರಣ ನಿರ್ಮಿಸುತ್ತದೆ. ಇನ್ನು ಕೊಯ್ಲಿನ ವೇಳೆ ಹೊರೆಗಳ ಸಾಲು ರೈತಾಪಿ ಬದುಕಿನ ಶ್ರೀಮಂತಿಕೆಯನ್ನು ಎತ್ತಿಹಿಡಿಯುತ್ತದೆ.
ನಾಟಿ ಮತ್ತು ಕೊಯ್ಲಿನ ವೇಳೆ 30ಕ್ಕ್ಕೂ ಹೆಚ್ಚು ಆಳುಗಳು ಇಲ್ಲಿ ಕೆಲಸ ಮಾಡುತ್ತಾರೆ. ಆದರೆ ಇಳುವರಿ ಕಡಿಮೆ. 20ರಿಂದ 30 ಖಂಡಗ ಭತ್ತ ಸಿಕ್ಕರೆ ಹೆಚ್ಚು. ಆದರೆ ಇದೇ ಜಾಗ ಬಯಲುಸೀಮೆಯಲ್ಲಿ ಇದ್ದಿದ್ದರೆ ಸುಮಾರು 30 ರಿಂದ 40 ಕ್ವಿಂಟಾಲ್ ಭತ್ತ ಇಳುವರಿ ಬರುತ್ತಿತ್ತು. ಆದರೆ ತಲೆತಲಾಂತರಿಂದ ಮಾಡಿಕೊಂಡ ಕೃಷಿ ಬದುಕು ಕೈಬಿಡಬಾರದು ಮತ್ತು ಮಲೆನಾಡಲ್ಲೇ ವಿಶೇಷ ಮತ್ತು ವಿಶಾಲವಾದ ಗದ್ದೆ ಹಾಗೇ ಬಿಡಬಾರದು ಅನ್ನೋ ಕಾರಣಕ್ಕೆ ರವಿ ಭಟ್ ಇಂದಿಗೂ ಭತ್ತದ ಕೃಷಿ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net