

ಬೆಂಗಳೂರು: ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’( ಎಬಿಎಆರ್‌ಕೆ) ಯೋಜನೆ ಫಲಾನುಭವಿಗಳಿಗೆ ಯಶಸ್ವಿನಿ ಯೋಜನೆಯಲ್ಲೇ ಪ್ರಯೋಜನ ಪಡೆಯಲು ಸೂಕ್ತ ಹಿಂಬರಹ ನೀಡಬಹುದು. ಖಾಸಗಿ ಆಸ್ಪತ್ರೆಗಳಲ್ಲಿನ ಚಿಕಿತ್ಸೆಯ ಸುರ್ವಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್‌ಎಎಸ್‌ಟಿ), ರೆಫರಲ್ ನೀಡುವ ಹಂತದಲ್ಲಿ ಈ ಹಿಂಬರಹ ನೀಡಬಹುದು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.
ಸರ್ಕಾರಿ ಆಸ್ಪತ್ರೆಗಳು ವ್ಯಾಪಾಕವಾಗಿ ಲಭ್ಯ ಇರುವುದರಿಂದ ಇವುಗಳ ಬಳಕೆಯ ಅವಕಾಶದಿಂದ ಯಶಸ್ವಿನಿ ಯೋಜನೆಯ ಫಲಾನುಭವಿಗಳು ವಂಚಿತವಾಗಬಾರದು.ಹಾಗಾಗಿ, ಇದನ್ನು ಮನಗಂಡು ಯಶಸ್ವಿನಿ ಯೋಜನೆ ಫಲಾನುಭವಿಗಳು ಎಬಿಎಆರ್‌ಕೆ ಅಡಿ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ನೀಡಿರುವ ಅನುಮತಿ ಮುಂದುವರಿಯಲಿದೆ. ಆದರೆ, ಎಸ್‌ಎಎಸ್‌ಟಿ ಕಡ್ಡಾಯವಾಗಿ ಎಲ್ಲ ಫಲಾನುಭವಿಗಳ ಮಾಹಿತಿಯನ್ನು ಸಹಕಾರ ಇಲಾಖೆಗೆ ಹಂಚಿಕೊಳ್ಳಬೇಕು. ಆರೋಗ್ಯ ಇಲಾಖೆಗೆ ಎಬಿಎಆರ್‌ಕೆ ದರದಲ್ಲಿ ಚಿಕಿತ್ಸಾ ವೆಚ್ಚ ಮರುಪಾವತಿಸಲು ಕ್ಲೇಮ್ ಸಲ್ಲಿಸಬೇಕು ಎಂದು ಇಲಾಖೆ ಹೇಳಿದೆ.
ಎಸ್‌ಎಎಸ್‌ಟಿ ಕಳೆದ ವರ್ಷದಲ್ಲಿ 3.07 ಲಕ್ಷ ಯಶಸ್ವಿನಿ ಲಾನುಭವಿಗಳಿಗೆ ಎಬಿಎಆರ್‌ಕೆ ಅಡಿ ಪಾವತಿಸಲಾದ 130.22 ಕೋಟಿ ರೂ.ಮೊತ್ತವನ್ನು ಸಹಕಾರ ಇಲಾಖೆಯಿಂದ ಆರೋಗ್ಯ ಇಲಾಖೆಗೆ ಮರು ಪಾವತಿಸಿಕೊಳ್ಳಲು ಮಾಹಿತಿಯನ್ನು ಆ ಇಲಾಖೆಗೆ ಹಂಚಿಕೊಳ್ಳಬೇಕು. ಈ ವ್ಯವಸ್ಥೆಯನ್ನು ತಕ್ಷಣದಿಂದ ಕಾರ್ಯಗತಗೊಳಿಸಲು ಎಸ್‌ಎಎಸ್‌ಟಿಗೆ, ಆರೋಗ್ಯ ಇಲಾಖೆ ಸೂಚಿಸಿದೆ. ಈ ಆದೇಶ ಅನುಷ್ಠಾನಗೊಳಿಸಲು ಏನಾದರೂ ಸಾಧಕ-ಭಾದಕ ಇದ್ದರೆ ಸರ್ಕಾರಕ್ಕೆ ಗಮನಕ್ಕೆ ತರಬೇಕೆಂದು ಹೇಳಿದೆ.