ಯುವ ಪ್ರತಿಭೆಗಳ ಅವಕಾಶ ತವರೂರು ರಾಜಧಾನಿ: ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿಕೆ

C N Ashwath Narayan
Published on

ಬೆಂಗಳೂರು: ದೇಶದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ವಿಚಾರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಚಿಕ್ಕಬಾಣಾವರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ್ರಥಮ ವರ್ಷದ ಇಂಜಿನಿಯರಿಂಗ್ ಕೋರ್ಸ್ ವಿದ್ಯಾರ್ಥಿಗಳ ಓರಿಯೆಂಟೇಶನ್’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭವಿಷ್ಯ ರೂಪಿಸಿಕೊಳ್ಳಲು ಸಿಲಿಕಾನ್ ಸಿಟಿಯಲ್ಲಿ ಎಲ್ಲ ಬಗೆಯ ತಂತ್ರಜ್ಞಾನ ಕ್ಷೇತ್ರಗಳಿವೆ. ಐಟಿ,ಬಿಟಿ, ಏರೋ ಸ್ಪೇಸ್, ಹಣಕಾಸು,ವೈದ್ಯಕೀಯ ಎಲ್ಲದರಲ್ಲೂ ಅತ್ಯುನ್ನತ ಸಾಧನೆ ಮಾಡಿರುವ ನಗರವಿದು. ಕನಸು, ಉದ್ದೇಶ ಈಡೇರಿಸಿಕೊಳ್ಳಲು ಇದಕ್ಕಿಂತ ಪ್ರಶಸ್ತ ಜಾಗ ಬೇರೊಂದು ಇಲ್ಲ. ಹಿಡಿದ ಕೆಲಸ ಸಾಧಿಸಲು ನಿಮಗೆ ನೀವೇ ಸಹಾಯ ಮಾಡಿಕೊಳ್ಳಬೇಕು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಪೂನ್ ಫೀಡಿಂಗ್ ವ್ಯವಸ್ಥೆ ಇರುವುದಿಲ್ಲ. ಮಾರ್ಗದರ್ಶನ ಇರುತ್ತದೆ. ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ದೇಶದಲ್ಲಿರುವ ಒಟ್ಟು ನವೋದ್ಯಮಗಳ ಪೈಕಿ ಅರ್ಧದಷ್ಟು ಬೆಂಗಳೂರಿನಲ್ಲಿವೆ. ಹೆಚ್ಚಿನ ಯಶಸ್ಸನ್ನು ಗಳಿಸಿವೆ. ನಿಮ್ಮ ಮುಂದೆ ಅವಕಾಶಗಳ ಹೆಬ್ಬಾಗಿಲೇ ತೆರೆದಿದೆ. ಕಾಲೇಜಿನಲ್ಲಿ ಬೋಧಿಸುವ ಕೋರ್ಸ್‌ನ ಜೊತೆಗೆ ಇನ್ನೊಂದಿಷ್ಟು ವಿಷಯ ಕಲಿತುಕೊಳ್ಳುವ ಅವಕಾಶ ನಿಮಗೆಲ್ಲಾ ಮುಕ್ತವಾಗಿದೆ. ಶಿಕ್ಷಣ ಕ್ಷೇತ್ರ ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅದಕ್ಕನುಗುಣವಾಗಿ ಕಾಲೇಜುಗಳು ಶಿಕ್ಷಣ ನೀಡಬೇಕು ಎಂದು ಶಾಸಕರು ಹೇಳುತ್ತಾರೆ.

ಅರ್. ಅರ್. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರಾಜಾರೆಡ್ಡಿ,ಎಚ್‌ಎಎಲ್ ಪ್ರಧಾನ ವ್ಯವಸ್ಥಾಪಕ ಪಿ. ವಾಂಗ್ ಚುಕ್, ಕಾರ್ಯದರ್ಶಿ ಎಚ್.ಆರ್. ಕಿರಣ್, ನಿರ್ದೇಶಕ ಎಚ್.ಆರ್.ಅರುಣ್, ಕಾಲೇಜಿನ ಪ್ರಾಂಶುಪಾಲ ಡಾ. ಕೆ.ವಿ. ಮಹೇಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net