ತೋಡಿಗೆ ಮಲಿನ ನೀರು : ಕಾಂಪ್ಲೆಕ್ಸ್, ಅಂಗಡಿ, ಮನೆ ಮಾಲೀಕರಿಗೆ ದಂಡ

Fine
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ನಗರದ ಹೊಸ ಬಸ್ ನಿಲ್ದಾಣ ವಠಾರದ ಕಾಂಪ್ಲೆಕ್ಸ್ ಹಾಗೂ ವಸತಿಗಳ ಕೊಳಚೆ ನೀರನ್ನು ಪ್ರತ್ಯೇಕ ಪೈಪ್ ಅಳವಡಿಸಿ ಕೋಟೆಕಣಿ ರಸ್ತೆಯ ಸನಿಹದ ಚೂರಿಯಲ್ಲಿ ತೋಡಿಗೆ ಹರಿಯಬಿಡುತ್ತಿರುವುದನ್ನು ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಪತ್ತೆಹಚ್ಚಿ ಸಂಬಂಧಪಟ್ಟವರಿಂದ ದಂಡ ವಸೂಲಿ ಮಾಡಿದೆ.

ಕಾಂಪ್ಲೆಕ್ಸ್ ಮಾಲೀಕಗೆ 25 ಸಾವಿರ ರೂ. ಹಾಗೂ ವಿವಿಧ ಕಟ್ಟಡಗಳಿಂದ ಮಲಿನ ನೀರು ತೋಡಿಗೆ ಹರಿಸಿರುವುದಕ್ಕೆ ತಲಾ 10 ಸಾವಿರ ಹಾಗೂ ವ್ಯಾಪಾರಿ ಸಂಸ್ಥೆಗಳಿಗೆ ತಲಾ 5 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಚೂರಿ ಆಸುಪಾಸಿನ ವಿವಿಧ ಮನೆಗಳಿಂದಲೂ ಮಲಿನ ನೀರನ್ನು ತೋಡಿಗೆ ಹರಿಯಬಿಡುತ್ತಿರುವುದನ್ನು ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಮಧೂರು ಗ್ರಾ.ಪಂ.ವ್ಯಾಪ್ತಿಯ ಚೂರಿ ಪ್ರದೇಶದ ತೋಡಿಗೆ ಮಲಿನ ನೀರು ಹರಿಯಬಿಡುತ್ತಿರುವುದರಿಂದ ಅಲ್ಲಲ್ಲಿ ಕೊಳಚೆನೀರು ಸಂಗ್ರಹಗೊಂಡು ವ್ಯಾಪಕ ದುರ್ವಾಸನೆ ಹಾಗೂ ಆರೋಗ್ಯ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಒಂದು ವಾರದೊಳಗೆ ಮಲಿನ ನೀರು ವಿಲೇವಾರಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಅಧಿಕಾರಿ ಕೆ.ವಿ.ಮುಹಮ್ಮದ್ ಮದನಿ, ನಗರಸಭೆ ಆರೋಗ್ಯ ನಿರೀಕ್ಷಕಿ ಆಶಾ ಮೇರಿ, ಪಂಚಾಯಿತಿ ಸಿಬ್ಬಂದಿ ಕೆ.ಅಶೋಕ್ ಕುಮಾರ್, ಸ್ಕ್ವಾಡ್ ಸದಸ್ಯ ಇ.ಕೆ ಫಾಸಿಲ್ ಮೊದಲದವರು ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net