

ಕಡಬ: ಮೆಸ್ಕಾಂ ಕಡಬ ಉಪ ವಿಭಾಗಮಟ್ಟದ ವಿದ್ಯುತ್ ಬಳಕೆದಾರರ ಜನಸ್ಪಂದನ ಸಭೆ ಮೆಸ್ಕಾಂ ಮಂಗಳೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಕೆ. ಅಧ್ಯಕ್ಷತೆಯಲ್ಲಿ ಕಡಬ ಮೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ನಡೆಯಿತು.
ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆಗ್ರಹಿಸಿದ ಬಳಕೆದಾರರು ಅಧಿಕ ಹೊರೆಯಿಂದಾಗಿ ತೊಂದರೆಗೀಡಾಗುತ್ತಿರುವ ವಿದ್ಯುತ್ ಪರಿವರ್ತಕಗಳ ಸಾಮರ್ಥ್ಯ ವೃದ್ಧಿಸುವುದು, ಶಿಥಿಲಗೊಂಡು ಅಪಾಯ ತಂದೊಡ್ಡುವ ಸಾಧ್ಯತೆಗಳಿರುವ ಹಳೇ ತಂತಿಗಳನ್ನು ಬದಲಾಯಿಸುವುದು ಮುಂತಾದ ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟರು.
ಅಹವಾಲು ಸ್ವೀಕರಿಸಿ ಮಾತನಾಡಿದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಕೆ, ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಿನಪೂರ್ತಿ ಕಾರ್ಯೋನ್ಮುಖರಾಗಿರುತ್ತಾರೆ. ಕಡಬ ಉಪ ವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗದ ಹಳೇ ತಂತಿ ಬದಲಾವಣೆ ಮತ್ತು ಪರಿವರ್ತಕಗಳ ಸಾಮರ್ಥ್ಯ ವೃದ್ಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತಾಂತ್ರಿಕ ಕಾರಣಗಳಿಂದ ಕೆಲವು ಸಂದರ್ಭ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಕೂಡಲೇ ಸಮಸ್ಯೆ ಬಗೆಹರಿಸಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸೇವಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ ಎಂದರು.
ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ. ಹಾಗೂ ಕಡಬ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್ ಮಾಹಿತಿ ನೀಡಿದರು. ಕಡಬ ಶಾಖಾಧಿಕಾರಿ ಸತ್ಯನಾರಾಯಣ ಸಿ.ಕೆ, ಆಲಂಕಾರು ಶಾಖಾಧಿಕಾರಿ ಪ್ರೇಮ್‌ಕುಮಾರ್, ನೆಲ್ಯಾಡಿ ಶಾಖಾಧಿಕಾರಿ ರಾಮಣ್ಣ, ಸೇವಾ ಕೇಂದ್ರದ ಮುಖ್ಯಸ್ಥ ವಸಂತಕುಮಾರ್ ಟಿ.ಎಂ. ಉಪಸ್ಥಿತರಿದ್ದರು. ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಕೆ. ಸ್ವಾಗತಿಸಿ, ವಂದಿಸಿದರು.
ದೂರವಾಣಿ ಮೂಲಕವೂ ದೂರು ಸಲ್ಲಿಕೆ
ಕಡಬದ ಅಡ್ಡಗದ್ದೆ ನಿವಾಸಿ ಮಹಮ್ಮದ್ ಕುಂಞಿ ಹಾಗೂ ಸಯ್ಯದ್‌ಮೀರಾ ಸಾಹೇಬ್ ವಿದ್ಯುತ್ ಮಾರ್ಗದಲ್ಲಿ ಅಧಿಕ ಹೊರೆ ಇರುವುದರಿಂದ ಹೆಚ್ಚುವರಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಸುವಂತೆ, ಬಿಳಿನೆಲೆಯ ಗಿರೀಶ್ ಸೂಡ್ಲು ಪರಿವರ್ತಕದ ತಂತಿಗಳು ಹಳೆಯದಾಗಿದ್ದು ಬದಲಿಸಿಕೊಡುವಂತೆ, ಕೋಡಿಂಬಾಳ ಗ್ರಾಮದ ಪನ್ಯ ಮಹಮ್ಮದ್ ಅಬೂಬಕ್ಕರ್ ಪನ್ಯ ಭಾಗದ ವಿದ್ಯುತ್ ಪರಿವರ್ತಕಕ್ಕೆ ಅಧಿಕ ಹೊರೆಯಾಗಿ ಸಮಸ್ಯೆ ಎದುರಾಗುತ್ತಿರುವುದರಿಂದ ಹೆಚ್ಚು ಸಾಮರ್ಥ್ಯದ ಪರಿವರ್ತಕ ಅಳವಡಿಸುವಂತೆ, ಆಲಂಕಾರಿನ ಸುನೀಲ್‌ಕುಮಾರ್ ಭಟ್ ಬಾರ್ಕುಳಿ ಬಳಿ 23 ಕೆವಿ ವಿದ್ಯುತ್ ಪರಿವರ್ತಕವನ್ನು 63 ಕೆವಿಗೆ ಏರಿಸುವಂತೆ, ಕೃಷ್ಣ ಕುಮಾರ್ ಭಟ್ ಅತ್ರಿಜಾಲು ಹೆಚ್ಚು ಸಾಮರ್ಥ್ಯದ ಪರಿವರ್ತಕ ಅಳವಡಿಸುವಂತೆ ಅಹವಾಲು ಸಲ್ಲಿಸಿದರು. ಕೆಲವು ಬಳಕೆದಾರರು ದೂರವಾಣಿಯ ಮೂಲಕವೂ ದೂರು ಸಲ್ಲಿಸಿದರು.