

ಮಂಗಳೂರು: ಎಸೆಸ್ಸೆಲ್ಸಿ ಪರೀಕ್ಷೆ ಮಾ.21ರಿಂದ ಆರಂಭಗೊಂಡು ಎ.4ರ ತನಕ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವ ಸಿದ್ಧತೆ ಗುರುವಾರ ಅಂತಿಮಗೊಂಡಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 29,760 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 521 ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡ ಒಟ್ಟು ವಿದ್ಯಾರ್ಥಿಗಳ ಪೈಕಿ 28,446 ಮಂದಿ ಹೊಸದಾಗಿ ಪರೀಕ್ಷೆ ಬರೆಯುವವರು. ಇವರಲ್ಲಿ 14,735 ಬಾಲಕರಿದ್ದರೆ, 13,711 ಬಾಲಕಿಯರು. 831 ಮಂದಿ ಖಾಸಗಿಯಾಗಿ ಮೊದಲ ಸಲ ಪರೀಕ್ಷೆ ಬರೆಯುತ್ತಿದ್ದಾರೆ. ಇವರಲ್ಲಿ 579 ಮಂದಿ ಪುರುಷ ಅಭ್ಯರ್ಥಿಗಳಿದ್ದರೆ, 252 ಮಂದಿ ಮಹಿಳಾ ಅಭ್ಯರ್ಥಿಗಳು. ಉಳಿದ 259 ಅಭ್ಯರ್ಥಿಗಳು ಖಾಸಗಿಯಾಗಿ ಮರು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 211 ಮಂದಿ ಪುರುಷರು ಹಾಗೂ 48 ಮಹಿಳೆಯರು.
521 ಶಾಲೆಗಳಲ್ಲಿ ಪರೀಕ್ಷೆ:
ಜಿಲ್ಲೆಯ ಒಟ್ಟು 521 ಶಾಲೆಗಳ 1332 ಕೊಠಡಿಗಳಲ್ಲಿ ಪರೀಕ್ಷೆ ನೆರವೇರಲಿದೆ. ಪರೀಕ್ಷೆಯನ್ನು ಶಿಸ್ತುಬದ್ಧವಾಗಿ ನಡೆಸುವ ಉದ್ದೇಶದಿಂದ ಒಟ್ಟು 1678 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಸಲು 1332 ಪರೀಕ್ಷಾ ಕೊಠಡಿ ಮೇಲ್ವಿಚಾರಕರು, 92 ಸಿಟ್ಟಿಂಗ್ ಸ್ಕ್ವಾಡ್, 92 ಸೆಂಟರ್ ಚೀಫ್‌ಗಳು, 92 ಕಚೇರಿ ಸಿಬ್ಬಂದಿ, 236 ಗ್ರೂಪ್ ಡಿ ಸಿಬ್ಬಂದಿ ಸೇರಿದಂತೆ ಒಟ್ಟು 2057 ಅಧಿಕಾರಿಗಳು, ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸಾಗಾಟ ಭದ್ರತೆಗೆ 34 ಪೊಲೀಸ್, ಪರೀಕ್ಷಾ ಕೇಂದ್ರಗಳ ಉಸ್ತುವಾರಿಗೆ 184 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಬಾಲಕರಿಗೂ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ದಿನದಂದು ಬಸ್ಸಿನಲ್ಲಿ ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು. ಪರೀಕ್ಷೆಯ ವಿವಿಧ ಹಂತಗಳ ಎಲ್ಲ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈಗಾಗಲೇ ಪ್ರಶ್ನೆಪತ್ರಿಕೆ ತಲುಪಿದ್ದು ಖಜಾನೆಯಲ್ಲಿ ಇರಿಸಲಾಗಿದೆ. ಮಕ್ಕಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಲು ಅನುಕೂಲಕರ ವಾತಾವರಣ ಕಲ್ಪಿಸಿದ್ದೇವೆ.
- ಗೋವಿಂದ ಮಡಿವಾಳ, ಡಿಡಿಪಿಐ, ದಕ್ಷಿಣ ಕನ್ನಡ.