

ರಾಮನಗರ: ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿರುವ ಕಿರುತೆರೆ ನಟಿ ಸವಿ ಮಾದಪ್ಪ ಸಾವಿನ ಪ್ರಕರಣ ಮತ್ತೊಂದು ಮಜಲಿಗೆ ಹೊರಳಿದ್ದು, ಆಕೆಯ ಸಾವಿಗೆ ಸಂಬಂಧಿಸಿದಂತೆ ನಟನೊಬ್ಬನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮಾತ್ರವಲ್ಲ, ಪೊಲೀಸರಿಗೆ ಆ ಕುರಿತು ದೂರನ್ನು ಕೂಡ ನೀಡಲಾಗಿದೆ.
ಕಿರುತೆರೆ ನಟಿ ಸವಿ ಮಾದಪ್ಪ (ಸೌಜನ್ಯ) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಪ್ರಭು ಮಾದಪ್ಪ, ಗಂಭೀರ ಆರೋಪವೊಂದನ್ನು ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಒಬ್ಬ ನಟನೂ ಸೇರಿ ಒಟ್ಟು ಇಬ್ಬರ ಹೆಸರನ್ನು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ಮಗಳ ಸಾವಿಗೆ ಆ ನಟನೇ ಕಾರಣ ಎಂದು ಅವರು ಕನ್ನಡ-ತೆಲುಗು ಕಿರುತೆರೆ ನಟನ ವಿರುದ್ಧ ದೂರು ನೀಡಿದ್ದಾರೆ. ಆತ ಮದುವೆಯಾಗು ಎಂದು ಮಗಳ ಸೌಜನ್ಯಳನ್ನು ಪೀಡಿಸುತ್ತಿದ್ದ. ಆತನೇ ಮನೆಗೆ ಬಂದಿರಬಹುದು, ನಂತರ ಆಕೆ ಆತ್ಮಹತ್ಯೆ ನಿರ್ಧಾರ ಮಾಡಿರಬಹುದು ಎಂದಿರುವ ಅವರು ಪ್ರಭು ಮಾದಪ್ಪ, ಆ ನಟನ ಜೊತೆಗೆ ಸೌಜನ್ಯ ಪಿಎ ಮಹೇಶ್ ವಿರುದ್ಧವೂ ದೂರು ನೀಡಿದ್ದಾರೆ. ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.