ಎಡ, ಐಕ್ಯರಂಗದಿಂದ ಪ್ರತ್ಯೇಕ ಮೆರವಣಿಗೆ

New Project (9)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿರುವುದಾಗಿ ಆರೋಪಿಸಿ, ಜಂಟಿ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಮುಷ್ಕರವು ಪೆರ್ಲ ಪೇಟೆಯಲ್ಲಿ ಆಂಶಿಕವಾಗಿ ಬಾಧಿಸಿತ್ತು. ಪುತ್ತೂರಿಂದ ಪಾಣಾಜೆ - ಸ್ವರ್ಗ - ಪೆರ್ಲ ಹಾದಿಯಾಗಿ ವಿಟ್ಲ ಸಂಚರಿಸುವ ಬಸ್‌ಗಳು ಎಂದಿನಂತೆ ಸಂಚಾರ ನಡೆಸಿದ್ದು, ವ್ಯಾಪಾರಿ ಮುಂಗಟ್ಟುಗಳು ತೆರೆದುಕೊಂಡಿತ್ತು. ಆಟೋ, ಟ್ಯಾಕ್ಸಿಗಳು ಸಂಚಾರ ನಡೆಸಿತ್ತು.

ರಾಷ್ಟ್ರವ್ಯಾಪಿಯಾಗಿ ಸಂಯುಕ್ತ ಮುಷ್ಕರ ಸಮಿತಿ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಮುಷ್ಕರದ ಬೇಡಿಕೆ ಒಂದೇ ಆಗಿದ್ದರೂ ಕೇರಳದಲ್ಲಿ ಐಕ್ಯರಂಗ ಹಾಗೂ ಎಡರಂಗದ ಕಾರ್ಮಿಕ ಸಂಘಟನೆಗಳು ಪ್ರತ್ಯೇಕವಾಗಿ ಮೆರವಣಿಗೆ ಆಯೋಜಿಸಿತ್ತು. ಕಾಸರಗೋಡಿನಲ್ಲೂ ಇದು ಗೋಚರಿಸಿದ್ದು, ಇಂಡಿ ಒಕ್ಕೂಟದ ಅಂಗಪಕ್ಷಗಳ ಪೋಷಕ ಸಂಘಟನೆಗಳು ಬೇರೆ ಬೇರೆಯಾಗಿ ಮೆರವಣಿಗೆ ಆಯೋಜಿಸಿತ್ತು.

ಎಡರಂಗ ಪೋಷಿತ ವಿವಿಧ ಕಾರ್ಮಿಕ ಸಂಘಟನೆಗಳನ್ನೊಳಗೊಂಡ ಮೆರವಣಿಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಿಂದ ಆರಂಭಿಸಿ, ಎಂ.ಜಿ.ರಸ್ತೆ ಮೂಲಕ ಹಾದು ಹಳೇ ಬಸ್ ನಿಲ್ದಾಣ ವಠಾರದ ಪ್ರಧಾನ ಅಂಚೆ ಕಚೇರಿ ಬಳಿ ಸಮಾವೇಶಗೊಂಡಿತ್ತು. ಬಳಿಕ ನಡೆದ ಸಭೆಯನ್ನು ಶಾಸಕ ಸಿ.ಎಚ್.ಕುಞಂಬು ಉದ್ಘಾಟಿಸಿದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಟಿ.ಕೆ.ರಾಜನ್, ಸಿ.ಎಂ.ಎ.ಜಲೀಲ್, ರಾವನ್, ಪಿ.ಮಣಿಮೋಹನನ್, ಸಿಜು ಕಣ್ಣನ್, ಬಿಜು ಉಣ್ಣಿತ್ತಾನ್, ಕೆ.ರವೀಂದ್ರನ್, ಪಿ.ಕುಂಜಂಬು, ಗಿರಿಕೃಷ್ಣನ್ ಮೊದಲಾದವರಿದ್ದರು. ಪ್ರಧಾನ ಕಾರ್ಯದರ್ಶಿ ಸಾಬು ಅಬ್ರಹಾಂ ಸ್ವಾಗತಿಸಿದರು.

ಐಕ್ಯರಂಗ ಪೋಷಿತ ಕಾರ್ಮಿಕ ಸಂಘಟನೆ ವತಿಯಿಂದ ನಡೆದ ಮೆರವಣಿಗೆ ಎಂಜಿ ರಸ್ತೆಯ ಬದ್ರಿಯಾ ಹೋಟೆಲ್ ವಠಾರದಿಂದ ಪ್ರಾರಂಭವಾಯಿತು. ನಂತರ ಹೊಸ ಬಸ್ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಭೆ ನಡೆಯಿತು. ಐಎನ್‌ಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ವಿ. ಕುಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಟಿಯು ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರ್, ಎ. ಅಹ್ಮದ್ ಹಾಜಿ, ಅರ್ಜುನನ್ ತಾಐಲಂಗಾಡಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net