

ಪುತ್ತೂರು ಗ್ರಾಮಾಂತರ: ಶಾಲಾ ವಠಾರದಲ್ಲಿ ಸಿಮೆಂಟ್ ನಿರ್ಮಿತ ಟಾಂಕ್ನಲ್ಲಿ ತುಂಬಿಸಿಟ್ಟಿದ್ದ ನೀರು ಏಕಾಏಕಿಯಾಗಿ ನೀಲಿ ಬಣ್ಣಕ್ಕೆ ತಿರುಗಿದ್ದು, ಆನೀರನ್ನು ಬಳಕೆ ಮಾಡಿದ ವಿದ್ಯಾರ್ಥಿಗಳ ಮೈ, ಕೈಯಲ್ಲಿ ತುರಿಕೆಯುಂಟಾದ ಘಟನೆ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ.
ಅಜ್ಜಿಕಲ್ಲು ಶಾಲೆಯ ಪಕ್ಕದಲ್ಲೇ ಸಿಮೆಂಟ್ನಿಂದ ನಿರ್ಮಿತ ನೀರಿನ ಟ್ಯಾಂಕ್ ಇದ್ದು, ಈ ಟಾಂಕ್ನ ನೀರನ್ನು ಶಾಲಾ ಮಕ್ಕಳು ಕೈಕಾಲು ತೊಳೆಯಲು, ಶೌಚಗೃಹಕ್ಕೆ ಬಳಸುತ್ತಿದ್ದರು. ಎಂದಿನಂತೆ ಬುಧವಾರ ಬೆಳಗ್ಗೆ ವಿದ್ಯಾರ್ಥಿಗಳು ಕೈ ತೊಳೆಯಲು ಹೋದಾಗ ನೀರಿನ ಟಾಂಕ್ ಸಂಪರ್ಕದ ನಳ್ಳಿಯಲ್ಲಿ ನೀಲಿ ಬಣ್ಣದ ನೀರು ಬರಲಾರಂಭಿಸಿತ್ತು. ಕೂಡಲೇ ವಿದ್ಯಾರ್ಥಿಗಳು ಈ ವಿಚಾರವನ್ನು ಶಿಕ್ಷಕರ ಗಮನಕ್ಕೆ ತಂದಿದ್ದರು. ಶಿಕ್ಷಕರು ಪರಿಶೀಲಿಸಿದಾಗ ಟಾಂಕ್ನ ನೀರು ನೀಲಿ ಬಣ್ಣದಿಂದ ಕೂಡಿತ್ತು. ಸ್ವಲ್ಪ ಹೊತ್ತಿನಲ್ಲೇ ಈ ನೀರಿನಲ್ಲಿ ಕೈಕಾಲು, ಮುಖ ತೊಳೆದ, ಶೌಚಕ್ಕೆ ಬಳಸಿದ ವಿದ್ಯಾರ್ಥಿಗಳಿಗೆ ನೀರು ಮಟ್ಟಿದ ಭಾಗದಲ್ಲೆಲ್ಲಾ ತುರಿಕೆ ಬರಲಾರಂಭಿಸಿತ್ತು ಎಂದು ತಿಳಿದು ಬಂದಿದೆ.
ಘಟನೆ ಕುರಿತು ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಎಸ್ಡಿಎಂಸಿ ಅಧ್ಯಕ್ಷ ಗಣೇಶ್ ಮುಂಡೋವುಮೂಲೆ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯ ಮಹೇಶ್ ರೈ ಕೇರಿ, ಆರೋಗ್ಯ ಇಲಾಖೆ ಸಿಎಚ್ಓ ವಿದ್ಯಾಶ್ರೀ, ಆಶಾ ಕಾರ್ಯಕರ್ತೆ ಸರೋಜಿನಿ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೀಲಿ ಬಣ್ಣಕ್ಕೆ ತಿರುಗಿರುವ ನೀರನ್ನು ಆರೋಗ್ಯ ಇಲಾಖೆಯವರು ಸಂಗ್ರಹಿಸಿಕೊಂಡು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ.
ಕುಡಿಯುವ ನೀರಿಗೆ ಪ್ರತ್ಯೇಕ ಟ್ಯಾಂಕ್
ಅಜ್ಜಿಕಲ್ಲು ಶಾಲೆಯಲ್ಲಿ ಬಿಸಿಯೂಟ ತಯಾರಿಸಲು, ಕುಡಿಯುವ ನೀರಿಗಾಗಿ ಪ್ರತ್ಯೇಕ ನೀರಿನ ಟ್ಯಾಂಕ್ ಇದ್ದು, ಸಿಮೆಂಟ್ನಿಂದ ನಿರ್ಮಿತ ಈ ಟಾಂಕ್ ನೀರನ್ನು ಶೌಚಗೃಹ, ಕೈಕಾಲು, ಮುಖ ತೊಳೆಯಲು ಮಾತ್ರ ಉಪಯೋಗಿಸಿದ್ದರು. ಈ ಸಿಮೆಂಟ್ ಟ್ಯಾಂಕ್ನ ನೀರನ್ನು ಮಂಗಳವಾರವಷ್ಟೇ ಖಾಲಿ ಮಾಡಿ ತೊಳೆದು, ಕೊಳವೆಬಾವಿಯಿಂದ ಮತ್ತೆ ನೀರು ತುಂಬಿಸಲಾಗಿತ್ತು. ಆದರೂ ನೀರು ನೀಲಿ ಬಣ್ಣಕ್ಕೆ ತಿರುಗಿರುವುದು. ನೀರು ಮುಟ್ಟಿದ ದೇಹದ ಭಾಗದಲ್ಲಿ ಮಕ್ಕಳಿಗೆ ತುರಿಕೆಯುಂಟಾಗಿರುವುದು ವಿಚಿತ್ರವೆನಿಸಿದೆ.
ಶಾಲೆಯಲ್ಲಿರುವ ಈ ಟಾಂಕ್ ನೀರನ್ನು ನಾವು ಶೌಚಗೃಹ, ಮಕ್ಕಳಿಗೆ ಕೈಮುಖ ತೊಳೆಯಲು ಮಾತ್ರವೇ ಬಳಸುತ್ತಿದ್ದೇವೆ. ಜುಲೈ 8ರಂದು ಟಾಂಕ್ ತೊಳೆದು ಶುಚಿಗೊಳಿಸಿ, ಕೊಳವೆಬಾವಿಯಿಂದ ಮತ್ತೆ ನೀರು ತುಂಬಿಸಿದ್ದೇವೆ. ಬುಧವಾರ ಬೆಳಗ್ಗೆ ನೋಡಿದಾಗ ನೀರು ನೀಲಿ ಬಣ್ಣಕ್ಕೆ ತಿರುಗಿರುವುದು ಕಂಡುಬಂದಿತ್ತು. ಈ ನೀರು ಮುಟ್ಟಿದ ದೇಹದ ಭಾಗದಲ್ಲಿ ತುರಿಕೆ ಬರುತ್ತಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದೆವು. ಆರೋಗ್ಯ ಇಲಾಖೆಯ ಸಿಎಚ್ಒ ಸ್ಥಳಕ್ಕೆ ಬಂದು ನೀರು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಕೊಂಡೊಯ್ದಿದ್ದಾರೆ. ಚಿತ್ರಾ ರೈ ಮುಖ್ಯ ಶಿಕ್ಷಕಿ