ಪುತ್ತೂರು: ಪುತ್ರನಿಂದ ನಡೆದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನಗರ ಮಂಡಲ ಮಾಜಿ ಅಧ್ಯಕ್ಷನಿಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರೂ ತನ್ನ ಕೈಸೇರಿಲ್ಲ ಎನ್ನುವ ಮೂಲಕ ಪ್ರಕರಣ ಹೊಸ ಆಯಾಮ ಪಡೆದುಕೊಂಡಿದೆ.
ಬಿಜೆಪಿ ಪುತ್ತೂರು ನಗರ ಮಂಡಲದಿಂದ ಬಿಜೆಪಿ ಜಿಲ್ಲಾಧ್ಯಕ್ಷರ ಸೂಚನೆಯಂತೆ ಜುಲೈ ೪ರಂದು ನೋಂದಣಿ ಅಂಚೆ ಮೂಲಕ ನೋಟಿಸ್ ಹೊರಟಿದ್ದು, ಪುತ್ತೂರು ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಬಿಜೆಪಿಯಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನೋಟಿಸಿನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದಲ್ಲದೆ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ದೃಢೀಕರಿಸಿದ್ದರು.
ಪಕ್ಷದಲ್ಲಿ ಜವಾಬ್ದಾರಿಯುತವಾಗಿ ನ್ಯಾಯಯುತವಾಗಿ ನಡೆದುಕೊಳ್ಳಬೇಕಾಗಿದ್ದು, ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದೆ. ಇಲ್ಲದಿದ್ದಲ್ಲಿ ಪಕ್ಷದ ಹಿತದೃಷ್ಟಿಯಿಂದ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ತಾವು ತಕ್ಷಣವೇ ಉತ್ತರಿಸಬೇಕು ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ನೋಟಿಸ್ ಪಕ್ಷದ ಲೆಟರ್ಹೆಡ್ ನಲ್ಲಿ ಇರದಿರುವ ಬಗ್ಗೆಯೂ ಕೆಲವೊಂದು ಅನುಮಾನಕ್ಕೆ ಕಾರಣವಾಗಿತ್ತು.