

ವಿಜಯನಗರ: ಪಕ್ಷ-ಪಂಥ-ಸಿದ್ಧಾಂತಗಳ ಸಂಘರ್ಷದ ಹಿನ್ನೆಲೆಯಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಸೇರಿದಂತೆ 61 ಮಂದಿಯನ್ನು ಉಲ್ಲೇಖಿಸಿ ಮತ್ತೊಂದು ಬೆದರಿಕೆ ಪತ್ರ ಬಂದಿದೆ. ಆ ಮೂಲಕ ಒಂದು ವರ್ಗದ ಸಾಹಿತಿಗಳ ವಲಯದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ಉಂಟಾಗಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರುವ ಸಾಹಿತಿ ಕುಂ. ವೀರಭದ್ರಪ್ಪ ಅವರ ಮನೆಗೆ ಈ ಪತ್ರ ಬಂದಿದೆ. ಪತ್ರದಲ್ಲಿ ಕುಂವೀ ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಿತ್ರನಟ ಪ್ರಕಾಶ್ ರೈ ಸೇರಿದಂತೆ 61 ಜನರ ಹೆಸರನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ.
ಈ ಹಿಂದೆ ಬಂದಿದ್ದ ಬೆದರಿಕೆ ಪತ್ರದಲ್ಲೂ 60ಕ್ಕೂ ಅಧಿಕ ಜನರ ಹೆಸರನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿದ್ದು, ಆ ಪತ್ರ ಭದ್ರಾವತಿಯಿಂದ ಪೋಸ್ಟ್ ಆಗಿತ್ತು. ಮೊದಲ ಪತ್ರ ಬಂದಾಗ ವಿಜಯನಗರ ಎಸ್ಪಿ ಡಾ. ಅರುಣ್ ಕೆ. ಅವರನ್ನು ಭೇಟಿಯಾಗಿದ್ದ ಕುಂವೀ, ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದರು. ಇದೀಗ ಎರಡನೇ ಪತ್ರದಲ್ಲೂ 60ಕ್ಕೂ ಅಧಿಕ ಮಂದಿಗೆ ಬೆದರಿಕೆ ಒಡ್ಡಲಾಗಿದ್ದು, ಈ ಪತ್ರ ಚಿತ್ರದುರ್ಗದಿಂದ ಪೋಸ್ಟ್ ಮಾಡಲಾಗಿದೆ.
ಹಿಂದುಗಳ ವಿರುದ್ಧ ಮಾತನಾಡಿರುವ ನೀವೆಲ್ಲ ಹಿಂದುಗಳ ಕ್ಷಮೆ ಕೇಳಬೇಕು, ಇಲ್ಲವೇ ಸಾಯಲು ಸಿದ್ಧರಾಗಬೇಕು. ನೀವು ನಿಮ್ಮ ತಂಡ ಪೇಪರ್ ಟೈಗರ್, ನಾವಲ್ಲ ಎಂದು ಸಹಿಷ್ಣು ಹಿಂದು ಎಂಬ ಹೆಸರಿನಲ್ಲಿ ಆರು ಪುಟಗಳ ಬೆದರಿಕೆ ಪತ್ರ ಬರೆಯಲಾಗಿದೆ.