ಹಳ್ಳಿಗಳಲ್ಲಿ ಸೋಂಕಿತರ ಹುಡುಕಾಟ: ಕರೊನಾ ಲಕ್ಷಣಗಳಿದ್ದರೂ ಟೆಸ್ಟ್​ಗೆ ಬರಲು ಹಿಂದೇಟು; ಪೊಲೀಸರು, ವೈದ್ಯರಿಂದ ಶೋಧ

Village
ಕರೊನಾ ಮಹಾಮಾರಿ ಹಳ್ಳಿಹಳ್ಳಿಗೂ ವ್ಯಾಪಿಸುತ್ತಿದ್ದು, ದುಷ್ಟಶಕ್ತಿಯನ್ನು ನಿಗ್ರಹಿಸುವಂತೆ ಜನ ಗ್ರಾಮದೇವತೆ ಮೊರೆ ಹೋಗುತ್ತಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ಸಮೀಪದ ದಂಡಿನ ಮಾರಮ್ಮನ ದೇವಸ್ಥಾನದಲ್ಲಿ ಸ್ಥಳೀಯರು ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಳ್ಳಿಗಳಲ್ಲಿ ಕರೊನಾ ಹರಡುವ ಎಚ್ಚರಿಕೆ ಕೊಟ್ಟಿದ್ದು, ಸೋಂಕಿನ ಲಕ್ಷಣಗಳಿದ್ದರೂ ಜನ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಜ್ವರ, ಕೆಮ್ಮು, ತಲೆನೋವಿದ್ದರೂ ಮೆಡಿಕಲ್ ಶಾಪ್​ಗಳಲ್ಲಿ ಮಾತ್ರೆ ಖರೀದಿಸಿ ಸೇವಿಸುತ್ತಿದ್ದಾರೆ. ಹೋಂ ಕ್ವಾರಂಟೈನ್​ನಲ್ಲೂ ಇರದೆ ಮಾಮೂಲಿಯಾಗಿ ಓಡಾಡುತ್ತಿರುವುದರಿಂದ ಇನ್ನಷ್ಟು ಜನರಿಗೆ ಸೊಂಕು ಹರಡುವ ಆತಂಕ ಸೃಷ್ಟಿಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತಗಳು ಗ್ರಾಮಗಳಿಗೇ ತೆರಳಿ ಸೊಂಕಿನ ಲಕ್ಷಣಗಳಿರುವವರನ್ನು ಹುಡಿಕಿ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.

ದಿಢೀರ್ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭಯದಲ್ಲಿ ವೈದ್ಯರು ಮತ್ತು ಪೊಲೀಸರ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದು, ಲಕ್ಷಣ ಇರುವರನ್ನು ಪತ್ತೆಹಚ್ಚಿ ಫೀವರ್ ಕ್ಲಿನಿಕ್​ಗೆ ಕರೆತಂದು ಕೋವಿಡ್ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಅಗತ್ಯ ಇದ್ದವರನ್ನು ಕೋವಿಡ್ ಕೇರ್ ಸೆಂಟರ್​ಗೆ ಅಥವಾ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಕೋವಿಡ್-19 ಲಾಕ್​ಡೌನ್, ಕರ್ಫ್ಯೂ ಜಾರಿಯಾದ ಮೇಲೆ ನಗರ, ಪಟ್ಟಣ ತೊರೆದು ಸಾಕಷ್ಟು ಜನರು ಗ್ರಾಮಗಳಿಗೆ ತೆರಳಿದ್ದು, ಸೋಂಕನ್ನು ಹೊತ್ತೊಯ್ದಿದ್ದಾರೆ. ಹಳ್ಳಿಗಳಲ್ಲಿ ಜನಸಂಖ್ಯೆ ಹಿಂದಿಗಿಂತ ಹೆಚ್ಚಾಗಿಯೇ ಇದೆ. ಇದರಿಂದ ಹಳ್ಳಿಗಳಲ್ಲಿ ಕೆಮ್ಮು, ಜ್ವರ, ಶೀತ, ಮೈಕೈ ನೋವು ಸೇರಿ ಕರೊನಾ ಲಕ್ಷಣಗಳು ಇದ್ದರೂ ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿಲ್ಲ. ಆರೋಗ್ಯ ಹದಗೆಟ್ಟ ಮೇಲೆ ತಾಲೂಕು, ಜಿಲ್ಲಾ ಆರೋಗ್ಯ ಕೇಂದ್ರಗಳ ಮೊರೆ ಹೋಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಜಾಗೃತಿ ಮೂಡಿಸಬೇಕಿದೆ: ಗ್ರಾಮೀಣ ಭಾಗದಲ್ಲಿ ಕರೊನಾ 2ನೇ ಅಲೆಯ ವಿರುದ್ಧ ಹೋರಾಟ ನಡೆಸುವ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವದಂತಿ, ಸುಳ್ಳು ಸುದ್ದಿಗಳು ಭಯ ಹುಟ್ಟಿಸಿವೆ. ಗ್ರಾಮ ಪಂಚಾಯಿತಿ ಮುಖಾಂತರ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಲಸಿಕೆ ಅಭಿಯಾನ, ಕೋವಿಡ್ ಪರೀಕ್ಷೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

ಕೊನೇ ಕ್ಷಣದ ಹೋರಾಟ!: ಗ್ರಾಮೀಣ ಭಾಗದ ಜನರಿಗೆ ಮಹಾಮಾರಿ ಕರೊನಾ ಸೋಂಕಿಗಿಂತ ವೈದ್ಯಕೀಯ ಸೇವೆ ಮೇಲಿನ ಅಪನಂಬಿಕೆ, ವದಂತಿಗಳೇ ಹೆಚ್ಚು ಭಯ ಹುಟ್ಟಿಸುತ್ತಿವೆ. ರೋಗ ಲಕ್ಷಣಗಳಿದ್ದರೂ ಪರೀಕ್ಷೆಗೆ ಒಳಗಾಗದೆ ಮನೆಗಳಲ್ಲಿ ಉಳಿದುಕೊಂಡಿದ್ದು, ಪ್ರಾಣಕ್ಕೆ ಆಪತ್ತು ತಂದುಕೊಳ್ಳುವ ಆತಂಕ ಎದುರಾಗಿದೆ. ಕೆಮ್ಮು, ಜ್ವರ, ಶೀತ, ಮೈ-ಕೈ ನೋವು ಇತ್ಯಾದಿಗೆ ಮೆಡಿಕಲ್ ಶಾಪ್​ನಲ್ಲಿ ಮಾತ್ರೆ ಪಡೆದು ಅಥವಾ ಕ್ಲಿನಿಕ್​ಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಯಲ್ಲಿಯೇ ಆಶ್ರಯ ಪಡೆಯುತ್ತಿದ್ದು, ಆರೋಗ್ಯ ಹದಗೆಟ್ಟ ಮೇಲೆ ಆರೋಗ್ಯ ಕೇಂದ್ರಗಳ ಮೊರೆ ಹೋಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕಿಡ್ನಿ ಕಸಿ, ಕ್ಯಾನ್ಸರ್​ಗೆ ಥೆರಪಿ ಇನ್ನಿತರ ಆಪರೇಷನ್​ಗಳಿಗೆ ಒಳಗಾಗಿರುವ ರೋಗಿಗಳು ಆಸ್ಪತ್ರೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಹಳ್ಳಿಗಳಿಗೂ ವೈದ್ಯರ ತಂಡ: ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಎರಡನೇ ಅಲೆ ಸೋಂಕು ನಿಯಂತ್ರಣಕ್ಕಾಗಿ ಹಳ್ಳಿಗಳಿಗೆ ವೈದ್ಯರ ತಂಡ ತೆರಳಲಿದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಜಾರಿಗೆ ತಂದಿರುವ ಈ ಪ್ರಯೋಗಿಕ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಉಡುಪಿಯಲ್ಲಿ ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು. ವಾರಕ್ಕೆ ಎರಡು ದಿನ ಗ್ರಾಮೀಣ ಭಾಗಕ್ಕೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ತಂಡ ತೆರಳಿ ಅಗತ್ಯ ಪರೀಕ್ಷೆ ನಡೆಸಬೇಕು. ತಿಂಗಳಿಗೆ ಬೇಕಾಗುವಷ್ಟು ಮಾಸ್ಕ್, ಗ್ಲೌಸ್, ಪಿಪಿಇ ಕಿಟ್, ಅಗತ್ಯ ವೈದ್ಯಕೀಯ ಪರಿಕರಗಳನ್ನು ಸರ್ಕಾರ ನೀಡಲಿದೆ ಎಂದರು.

ಟೆಸ್ಟ್​ಗೆ ಹಿಂದೇಟು ಏಕೆ?

  • ಕೋವಿಡ್ ಪರೀಕ್ಷೆ ಮಾಡಿಸಿ ಪಾಸಿಟಿವ್ ಬಂದರೆ ಅಕ್ಕಪಕ್ಕದವರಿಂದ ನಿಂದನೆ
  • ಸೋಂಕು ದೃಢವಾದರೆ ಆಶಾ ಕಾರ್ಯಕರ್ತೆ ಯರು ಬಂದು ಕರೆದೊಯ್ಯುವ ಆತಂಕ
  • ದೂರದ ಆಸ್ಪತ್ರೆಗಳಿಗೆ ದಾಖಲಿಸಿ ಸಂಬಂಧಿಕ ರಿಂದ ದೂರ ಮಾಡುತ್ತಾರೆಂಬ ಭಯ
  • ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ, ಅಮ್ಲಜನಕ, ಐಸಿಯು ಬೆಡ್ ಸಿಗದೆ ಪರದಾಟ
  • ಸೂಕ್ತ ಔಷಧ, ಊಟ ಕೊಡದೆ ವೈದ್ಯರು ನಿರ್ಲಕ್ಷ್ಯ ಮಾಡಿ ಸಾಯಿಸುತ್ತಾರೆಂಬ ವದಂತಿ
  • ಆಸ್ಪತ್ರೆಗೆ ಹೋದವರು ಯಾರೂ ವಾಪಸ್ ಬಂದಿಲ್ಲ, ನೇರ ಸ್ಮಶಾನಕ್ಕೆ ಎಂಬ ಭ್ರಮೆ
  • ಆಸ್ಪತ್ರೆಯಲ್ಲಿ ಸತ್ತರೇ ಶವ ಕೊಡುವುದಿಲ್ಲ, ಸತ್ತರೇ ಮನೆಯಲ್ಲಿಯೇ ಸಾಯೋಣ ಎಂಬ ನಂಬಿಕೆ
  • ಭಯಹುಟ್ಟಿಸಿದ ದೀರ್ಘಕಾಲದ ಅನಾರೋಗ್ಯ, ಅನ್ಯ ಕಾರಣಕ್ಕೆ ಲಸಿಕೆ ಪಡೆದವರ ಸಾವು
  • ಆಸ್ಪತ್ರೆಯಲ್ಲಿ ರೋಗಿಯನ್ನು ಕೊಲ್ಲುತ್ತಿರುವ ನಕಲಿ ವಿಡಿಯೋ ವೈರಲ್
  • ದಿನೇದಿನೆ ಹೆಚ್ಚಾಗುತ್ತಿರುವ ಸಾವಿನ ಸಂಖ್ಯೆ ಕೇಳಿ ಭಯಗೊಂಡ ಹಳ್ಳಿ ಜನ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net