ಶಾಲಾ ಮಕ್ಕಳಿಗೆ ಬೇಕು ಬಸ್ : ಬಡ ವಿದ್ಯಾರ್ಥಿಗಳಿಗೆ ಸಮಸ್ಯೆ ವ್ಯವಸ್ಥೆಗೆ ಸ್ಥಳೀಯರ ಆಗ್ರಹ

bus
Published on

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಹೆಬ್ರಿ ತಾಲೂಕಿನ ವಂಡಾರಬೆಟ್ಟು, ವಿದ್ಯಾನಗರ, ಬಸದಿ ರೋಡು, ಕರಾಡಿ, ಹಂದಿ ಕಲ್ಲು, ಬಾದ್ಲು ಹಾಗೂ ಕೆಳ ಬಾದ್ಲಿನಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಬಸ್ ವಂಚಿತರಾಗಿ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಚೂರು ಹಾಗೂ ಹೆಬ್ರಿಗೆ ಹೋಗುತ್ತಾರೆ. ಬೆಳಗಿನ ಜಾವ ಕೂಲಿ ಕಾರ್ಮಿಕರು ಕಿಲೋ ಮಿಟರ್‌ಗಟ್ಟಲೆ ನಡೆದು ಸಾಗಬೇಕು. ಬಸ್ ವ್ಯವಸ್ಥೆಯಿಲ್ಲದೆ ಬಡ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿರುವುದನ್ನು ಸಂಬಂಧಪಟ್ಟವರು ವ್ಯವಸ್ಥೆ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುಖ್ಯರಸ್ತೆಗೆ 5 ಕಿ.ಮೀ.

ಬಸದಿ ರಸ್ತೆಯಿಂದ ಮುಖ್ಯರಸ್ತೆಗೆ ಬರಲು ಮೂರು ಕಿಲೋಮೀಟರ್ ನಡೆಯಬೇಕು. ಹಂದಿ ಕಲ್ಲು, ಕಾರಡಿಯಿಂದ 5 ಕಿ.ಮೀ. ಅದಕ್ಕಾಗಿ ಕೆಲವರು ರಿಕ್ಷಾವನ್ನು ಅವಲಂಬಿಸಿದ್ದಾರೆ. ಬಡವರಿಗೆ ರಿಕ್ಷಾದ ದರ ಹೆಚ್ಚುವರಿಯಾಗಿ ಪಾವತಿಸುವುದು ಹೊರೆಯಾಗಿದೆ.

ಬೆಳಗ್ಗೆ, ಸಂಜೆ ಒಂದು ಬಸ್ ಬರಲಿ

ಬೆಳಗ್ಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಒಂದು ಬಸ್, ಸಂಜೆ ವಿದ್ಯಾರ್ಥಿಗಳನ್ನು ಕರೆದು ಕೊಂಡು ಹೆಬ್ರಿ ಹಾಗೂ ಕುಚ್ಚೂರು ಭಾಗದಿಂದ ಬಸ್ ಬಂದರೆ ಜನರಿಗೆ ಉಪಯೋಗವಾಗುತ್ತದೆ. ಕೂಲಿ ಕಾರ್ಮಿಕರೂ ಪ್ರಯೋಜನ ಪಡೆಯಬಹುದು. ಇದರಿಂದಾಗಿ ಮಳೆಗಾಲದಲ್ಲಿ ಕೆಸರು ರೋಡಿನಲ್ಲಿ ನಡೆದುಕೊಂಡು ಹೋಗುವುದು ತಪ್ಪುತ್ತದೆ. ಆದ್ದರಿಂದ ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಅಧಿಕಾರಿಗಳು ಬಸ್ ಬರುವಂತೆ ವ್ಯವಸ್ಥೆ ಮಾಡಬೇಕೆಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ.

ಶಾಲಾ ದಾಖಲಾತಿಗೆ ತೊಂದರೆ

ಕೆಲವರು ಪಾಲಕರು ಬಹದೂರ ನಡೆದುಕೊಂಡು ಹೋಗುವುದಕ್ಕಿಂತ ಆಟೋ ದ ಮೂಲಕ ಹೆಬ್ರಿ ಶಾಲೆಗೆ ಕಳಿಸುತ್ತಾರೆ. ಸಮೀಪದ ಶಾಲೆಗಳಲ್ಲಿ ಇದರಿಂದಾಗಿ ದಾಖಲಾತಿಗೆ ಸಮಸ್ಯೆಯಾಗುತ್ತದೆ. ಶಾಸ್ತ್ರಿನಗರ ಸಳ್ಳೆಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇದರಿಂದ ಸಮಸ್ಯೆಯಾಗಿದೆ.

ಉಚಿತ ಸಾರಿಗೆ ವ್ಯವಸ್ಥೆ

ಉದ್ಯಮಿ ವಾದಿರಾಜ ಶೆಟ್ಟಿ ವಂಡರಬೆಟ್ಟು ಶಾಲೆಯಲ್ಲಿ ಹತ್ತು ವರ್ಷಗಳಿಂದ ಬಸ್ ವ್ಯವಸ್ಥೆ ಇಲ್ಲದ ಇರುವುದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಗೆ ತಲುಪಿಸಲು ಉಚಿತ ಸಾರಿಗೆ ವ್ಯವಸ್ಥೆ ಮಾಡಿದ್ದಾರೆ. 15 ವರ್ಷಗಳಿಂದ ಶಾಲೆಗೆ ಬೇಕಾದ ಎಲ್ಲ ಮೂಲ ಸೌಕರ್ಯ ಹಾಗೂ ವಿದ್ಯಾರ್ಥಿಗಳಿಗೆ ಕನಕ ಉಪಕರಣ ನೀಡಿ ಶಾಲೆ ಬೆಳವಣಿಗೆಗೆ ಕಾರಣಿಕರ್ತರಾಗಿದ್ದಾರೆ.

ಬಸ್ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಮನವಿ ನೀಡಲಿ. ವಿದ್ಯಾರ್ಥಿಗಳಿಗೆ ಆದ್ಯತೆ ನೆಲೆಯಲ್ಲಿ ಸೌಕರ್ಯ ನೀಡಲು ಆರ್‌ಟಿಒ ಸಭೆಯಲ್ಲಿ ಚರ್ಚಿಸಲಾಗುವುದು.-ಡಾ.ಕೆ.ವಿದ್ಯಾ ಕುಮಾರಿ ಉಡುಪಿ ಜಿಲ್ಲಾಧಿಕಾರಿ

ಹೆಬ್ರಿ, ಚಾರ, ಬಸದಿ, ಹಂದಿಕಲ್ಲು ನಾಲ್ಕೂರು ಮದ್ದೂರು ಹೋರ್ಲಾಳಿ ಮುದ್ದು ಮನೆ, ಮಂದಾರ್ತಿ ಮೂಲಕ ಉಡುಪಿ ಬಸ್ ರೂಟ್ ಇದ್ದರೆ ಉತ್ತಮ ಆಗುತ್ತಿತ್ತು. ಬಡ-ಕೂಲಿ ಕಾರ್ಮಿಕರ ಮಕ್ಕಳು, ರೈತರ ಮಕ್ಕಳು ಸರ್ಕಾರಿ ಶಾಲೆಗೆ ಹೋಗಲು ಬಸ್ ವ್ಯವಸ್ಥೆ ಇಲ್ಲದೆ ದುಬಾರಿ ವೆಚ್ಚದಲ್ಲಿ ಆಟೋದಲ್ಲಿ ಹೋಗುತ್ತಿದ್ದಾರೆ.-ಮಿಥುನ್ ಶೆಟ್ಟಿ ಸಾಮಾಜಿಕ ಕಾರ್ಯಕರ್ತ

ನಮಗೆ ಬಸ್ ವ್ಯವಸ್ಥೆ ಸಹಾಯವಾಗುತ್ತಿತ್ತು, ಬಹುದೂರ ನಡೆಯಲು ಮಳೆಗಾಲದಲ್ಲಿ ಕಷ್ಟ ಆಗುತ್ತದೆ. ಅಧಿಕಾರಿಗಳು ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಬಸ್ ಕಲ್ಪಿಸುವ ವ್ಯವಸ್ಥೆ, ಬಸ್ ಮಾಲೀಕರು ನಮ್ಮೊಂದಿಗೆ ದಯಮಾಡಿ ಸಹಕಾರ ಮಾಡಿ.-ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net