

ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಹೆಬ್ರಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೃಷಿಯ ಬಗ್ಗೆ ಒಲವು ಮೂಡಿಸಲು ರೈತರಿಗೆ ವಿಶೇಷ ತರಬೇತಿ ನೀಡಿ ನಾಲ್ಕು ನರ್ಸರಿ ಕೇಂದ್ರಗಳ ರಚನೆ ಮಾಡಿ ಸುಮಾರು 1,200 ಎಕರೆಗೆ ಬೇಕಾಗುವಷ್ಟು ಮ್ಯಾಟ್ ನೇಜಿ ಸಿದ್ಧಪಡಿಸಿ ಸ್ಥಳೀಯ ರೈತರಿಗೆ ನೀಡುತ್ತಿದ್ದಾರೆ.
ಕೃಷಿಯಿಂದ ವಿಮುಕರಾಗುತ್ತಿರುವ ರೈತರನ್ನು ಕೃಷಿಯತ್ತ ಗಮನ ಸೆಳೆಯಬೇಕು. ಆಧುನಿಕ ಕೃಷಿಯೊಂದಿಗೆ ರೈತ ಬೆಳೆಯಬೇಕು. ಎಲ್ಲೆಡೆ ಭತ್ತ ಬೇಸಾಯದಿಂದ ರೈತ ಸಮುದಾಯ ವಿಮುಖರಾಗುತ್ತಿರುವ ಈ ಕಾಲದಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭತ್ತದ ಬೇಸಾಯಕ್ಕೆ ರೈತರಿಗೆ ಉಮೇದು ನೀಡಿ ಸಹಕಾರ ನೀಡುತ್ತಿದೆ. ಯಂತ್ರಶ್ರೀ ನಾಟಿ ಮೂಲಕ ಭತ್ತ ಉಳಿಸುವ ಮಹತ್ವದ ಯೋಜನೆ ಕೃಷಿ ವಿಭಾಗ ಕೈಗೆತ್ತಿಕೊಂಡಿದೆ. ಒಂದು ಎಕರೆ ಗದ್ದೆಗೆ 80 ಮ್ಯಾಟ್ ನೇಜಿ ನಾಟಿ ಯಂತ್ರದ ಮೂಲಕ ನಾಟಿ ಮಾಡಲಾಗುತ್ತದೆ. ಒಂದು ಎಕರೆ ಗದ್ದೆಗೆ ಕೇವಲ 2 ಗಂಟೆಯಲ್ಲಿ ನಾಟಿ ಮಾಡಲಾಗುತ್ತದೆ, ಅತೀ ಕಡಿಮೆ ಸಂಖ್ಯೆಯ ಕೃಷಿ ಕೂಲಿ ಆಳುಗಳೊಂದಿಗೆ ನಿಗದಿತ ಸಮಯದಲ್ಲಿ ನಾಟಿ ಮಾಡಲಾಗುತ್ತದೆ. ಮಾಮೂಲಿ ಪದ್ಧತಿ ನಾಟಿಗಿಂತ, ಯಂತ್ರಶ್ರೀ ಪದ್ಧತಿಯಲ್ಲಿ ಅಧಿಕ ಇಳುವರಿ ಬರುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ 1200 ಎಕರೆ ಗದ್ದೆಯಲ್ಲಿ ಯಂತ್ರಶ್ರೀ ನಾಟಿ ಮಾಡಲು ಸಕಲ ಪೂರ್ವಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಕೃಷಿ ಮೇಲ್ವೀಚಾರಕ ಉಮೇಶ್ ಬಿ.ಕೆ. ಮಾಹಿತಿ ನೀಡಿದರು.
ಒಂದು ಎಕರೆ ಗದ್ದೆಗೆ 80 ನರ್ಸರಿ ಮ್ಯಾಟ್ ಬೇಕಾಗುತ್ತದೆ. ಕುಬೋಟೊ ನಾಟಿ ಯಂತ್ರದ ಮೂಲಕ ಒಂದು ಎಕರೆಯನ್ನು ಎರಡು ಗಂಟೆ ಒಳಗೆ ನಾಟಿ ಮಾಡಲಾಗುತ್ತದೆ. ಮುಂಗಡವಾಗಿ ರೈತರು ತಮ್ಮ ಕೃಷಿ ಗದ್ದೆಗಳನ್ನು ಹದಗೊಳಿಸಿಟ್ಟುಕೊಳ್ಳಬೇಕು. ರೈತರಿಗೆ ಗದ್ದೆ ನಾಟಿಗೆ ನಿಗದಿತ ದಿನಾಂಕ ನೀಡಲಾಗುತ್ತದೆ. ನಿಗದಿತ ದಿನದಂದೇ ಅವರ ಗದ್ದೆ ನಾಟಿ ಕಾರ್ಯವೂ ಪೂರ್ಣಗೊಳ್ಳುತ್ತದೆ. ಬೇಸಾಯ ಕಷ್ಟ ಎನ್ನುತ್ತಿದ್ದವರು ಈಗ ಸುಲಭ ಎನ್ನುತ್ತಿದ್ದು ಭತ್ತದ ಬೇಸಾಯಕ್ಕೆ ಮುಂದಾಗುತ್ತಿದ್ದಾರೆ. ಹಡಿಲು ಬಿಟ್ಟ ಗದ್ದೆಯವರೂ ಕೂಡ ಭತ್ತದ ಬೇಸಾಯ ಮಾಡಲು ಆಸಕ್ತರಾಗಿದ್ದಾರೆ. ಈಗ ಹೆಬ್ರಿ ತಾಲೂಕಿನಾದ್ಯಂತ ಯಂತ್ರಶ್ರೀ ಗದ್ದೆ ನಾಟಿಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ ಸಹಿತ ಯೋಜನೆ ಸರ್ವರ ವಿಶೇಷ ಸಹಕಾರದಿಂದ ಯಂತ್ರಶ್ರೀ ಗದ್ದೆ ನಾಟಿಯಂತಹ ಮಹಾನ್ ಕಾರ್ಯ ಮಾಡಲು ಶಕ್ತಿ ಬರುತ್ತದೆ. ಕಳೆದ ವರ್ಷದಲ್ಲಿ ಹೆಬ್ರಿ ತಾಲೂಕಿನಲ್ಲಿ 1130 ಎಕರೆ ಗದ್ದೆಯಲ್ಲಿ ನಾಟಿ ಯಂತ್ರಶ್ರೀ ನಾಟಿ ಕಾರ್ಯ ಮಾಡಲಾಗಿದ್ದು ಈ ವರ್ಷದಲ್ಲಿ 1200 ಎಕರೆ ಗದ್ದೆ ನಾಟಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಮೇಶ್ ಬಿ.ಕೆ. ತಿಳಿಸಿದರು.
ಕಡಿಮೆ ಬಡ್ಡಿ ದರದಲ್ಲಿ ಸಾಲ, ಗದ್ದೆಗೆ ಬೇಕಾಗುವ ಎಲ್ಲ ಕೃಷಿ ಸಲಕರಣೆ, ಯಂತ್ರ ಒದಗಿಸಿ ನಿಗದಿಪಡಿಸಿದ ದಿನದಂದು ನಾಟಿ ಕಾರ್ಯ ನಡೆಯುತ್ತದೆ. ಮಾಮೂಲಿ ಪದ್ಧತಿಯಲ್ಲಿ ಕೂಲಿ ಆಳುಗಳು ಬಳಕೆ ಮಾಡುವುದು ದುಬಾರಿಯಾಗುತ್ತದೆ. ಯಂತ್ರಶ್ರೀಯಲ್ಲಿ ಕೇವಲ ಎರಡು ಗಂಟೆಯಲ್ಲಿ ನಾಟಿಕಾರ್ಯ ಮುಗಿಯುತ್ತದೆ. ಸಾಂಪ್ರದಾಯಿಕ ಪದ್ಧತಿಯಲ್ಲಾದರೆ ಇಡೀ ದಿನ ಬೇಕಾಗುತ್ತದೆ. ಮ್ಯಾಟ್ ನೇಜಿ ಶೇ.20 ಇಳುವರಿ ಹೆಚ್ಚಿರುತ್ತದೆ. ಗಾಳಿ ಬೆಳಕು ಉತ್ತಮವಾಗಿದ್ದು ಕಡಿಮೆ ನೀರು ಸಾಕಾಗುತ್ತದೆ. ಜೊಳ್ಳು ಕಡಿಮೆ ಇರುತ್ತದೆ. ಪ್ರಗತಿ ನಿಧಿ ಯೋಜನೆಯಲ್ಲಿ ಮುಂಗಡವಾಗಿ ಹಣಕಾಸು ನೆರವು ನೀಡಿ ಬಿತ್ತನೆ ಬೀಜ ಖರೀದಿಸುವುದರಿಂದ, ಕಟಾವು ಮಾಡುವ ತನಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ರೈತರಿಗೆ ದೊರೆಯಲಿದೆ.
ರೈತರು ಕಡಿಮೆ ಖರ್ಚಿನಲ್ಲಿ ಯಂತ್ರಗಳ ಬಳಕೆ, ಸಮಯ ಉಳಿಕೆ, ನಿಗದಿತ ದಿನದಲ್ಲಿ ನಾಟಿ, ಆದಾಯ ವೃದ್ಧಿ, ಪ್ರಗತಿ ನಿಧಿ ಸಹಾಯ, ಉತ್ಕೃಷ್ಟ ಮಟ್ಟದ ಮ್ಯಾಟ್ ನೇಜಿ, ನೇಜಿ ನೆಡುವ ಮಷಿನ್ ಕಡಿಮೆ ದರದಲ್ಲಿ ಒದಗಿಸಲಾಗುವುದು.
ಭೂಮಿಯನ್ನು ಹಸಿರುಗೊಳಿಸುವ ಉದ್ದೇಶದಿಂದ ರೈತರಿಗೆ ಹಡಿಲು ಭೂಮಿ ಕೃಷಿ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಹೆಬ್ರಿ ತಾಲೂಕಿನಲ್ಲಿ ಸುಮಾರು 150 ಎಕರೆ ಜಾಗದಲ್ಲಿ ಹಡಿಲು ಭೂಮಿ ಕೃಷಿ ಯೋಜನೆ ಪ್ರೋತ್ಸಾಹದಿಂದ ನಡೆಯಲಿದೆ. ಗದ್ದೆ ಬಹುಕಾಲ ಹಡಿಲು ಬಿಟ್ಟರೆ ಶಾಶ್ವತವಾಗಿ ಕೃಷಿಭೂಮಿ ಹಾಳಾಗುತ್ತದೆ. ಹೀಗಾಗಿ ಹಡಿಲು ಭೂಮಿ ಬಳಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಯೋಜನೆ ವಿಶೇಷ ಕಾರ್ಯಕ್ರಮ ರೂಪಿಸಿದೆ.
ಸರ್ಕಾರ ಸಬ್ಸಿಡಿ ನಮಗೆ ಕೊಟ್ಟರೆ ಬಹಳಷ್ಟು ಕಡಿಮೆ ದರದಲ್ಲಿ ರೈತರಿಗೆ ನೇಜು ನೀಡಬಹುದು. ಅಧಿಕಾರಿಗಳು ಕೇವಲ ಫೋನ್ ಮೂಲಕ ಮಾಹಿತಿ ಕೇಳುತ್ತಾರೆ. ಸ್ಥಳಕ್ಕೆ ಬಂದು ರೈತನ ಕಷ್ಟ ಅರ್ಥ ಮಾಡಿಕೊಳ್ಳಲಿ. ಮಳೆ ಕೊರತೆಯಿಂದ ಬಹಳಷ್ಟು ಸಮಸ್ಯೆ ಉಂಟಾಗಿತ್ತು. ನಿಜವಾಗಿ ಯಾರು ಕಷ್ಟ ಪಡುತ್ತಾರೆ ಅವರಿಗೆ ಸರ್ಕಾರದ ಸೌಲಭ್ಯ ಸಿಗಲಿ ಎಂದು ನರ್ಸರಿ ರೈತರು ಆಶಿಸುತ್ತಾರೆ.
ತಾಲೂಕಿನಲ್ಲಿ ಬೆಳ್ವೆ, ಶಿವಪುರ ಸಮೀಪದ ಎಲಿಕೊಡ್ಲು, ಕುಂದಾರು, ಮಡಾಮಕ್ಕಿಯಲ್ಲಿ ಸುಮಾರು 56 ಸಾವಿರ ಟ್ರೈ ಮ್ಯಾಟ್ ನೇಜಿ ಸಿದ್ಧಪಡಿಸಲಾಗಿದೆ. ಎಂಒ4, ಕಜೆ ಜಯ, ಸಹ್ಯಾದ್ರಿ ಬ್ರಹ್ಮ, ಸಹ್ಯಾದ್ರಿ ಪಂಚಮುಖಿ ತಳಿಗಳನ್ನು ಬೆಳೆಸಲಾಗಿದೆ. ಜಿಲ್ಲೆಯ ವಿವಿಧೆಡೆಯಿಂದ ಬೇಡಿಕೆ ಬರುತ್ತಿರುವುದರಿಂದ ಪೂರೈಸಲು ಕಷ್ಟವಾಗುತ್ತಿದೆ ಎನ್ನುತ್ತಾರೆ ರೈತರು.
ರೈತರಿಗೆ ಬೇಕಾಗುವ ಸಕಲ ಸೌಲಭ್ಯ, ವ್ಯವಸ್ಥೆ, ತಾಂತ್ರಿಕತೆ, ಆಧುನಿಕತೆ ಸಮಗ್ರ ಮಾಹಿತಿ ರೈತರಿಗೆ ನೀಡಿ ಭತ್ತದ ಬೇಸಾಯದಲ್ಲಿ ಇನ್ನಷ್ಟು ಸಕ್ರಿಯವಾಗಿ ರೈತರು ಮಾಡುವಲ್ಲಿ ಶ್ರಮವಹಿಸಲಾಗುತ್ತಿದೆ. ಮೂವತ್ತು ಸಾವಿರ ಟ್ರೇ ಮ್ಯಾಟ್ ನೇಜಿ ತಯಾರು ಮಾಡಿ ಯೋಜನೆ ಸಹಾಯದೊಂದಿಗೆ ಕೃಷಿಯಲ್ಲಿ ತೊಡಗಿದ್ದೇನೆ. ಇದೊಂದು ಸಣ್ಣ ಪ್ರಯತ್ನ. ವೀರೇಂದ್ರ ಹೆಗ್ಗಡೆಯವರು ಕೃಷಿಯ ಉಳಿವಿಕೆಗಾಗಿ ಮಾಡುತ್ತಿರುವ ಕಾರ್ಯಕ್ರಮಗಳೆಲ್ಲವೂ ನಮಗೆ ಸ್ಫೂರ್ತಿ. ನೇಜಿಗಾಗಿ ಬಹಳಷ್ಟು ಬೇಡಿಕೆ ಇದೆ.-ಕೃಷ್ಣ ನಾಯ್ಕ, ಬೆಳ್ವೆ ಕೇಂದ್ರೀಕೃತ ಭತ್ತ ನರ್ಸರಿ ತಯಾರಕ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿಯಲ್ಲಿ ರೈತರು ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅನೇಕ ಯೋಜನೆ ರೂಪಿಸಿದೆ. ನಮ್ಮ ಕೃಷಿ ಅಧಿಕಾರಿ ಉಮೇಶ್ ಅವರು ಉತ್ತಮ ಕೆಲಸ ಮಾಡಿ. ಹೆಬ್ರಿ ಗ್ರಾಮೀಣ ಭಾಗದಲ್ಲಿ ಸುಮಾರು 1,200 ಎಕರೆಗೆ ಬೇಕಾದ ಮ್ಯಾಟ್ ನೇಜಿ ಸಿದ್ಧಪಡಿಸಿದ್ದಾರೆ. ಬೇಸಾಯ ನಷ್ಟ ಎನ್ನುವವರು, ಬೇಸಾಯದ ಗದ್ದೆ ಹಡಿಲು ಬಿಟ್ಟವರು ಬೇಸಾಯ ಮಾಡುವ ಮನಸ್ಸು ಮಾಡಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ.-ಲೀಲಾವತಿ, ಹೆಬ್ರಿ ತಾಲೂಕು ಯೋಜನಾಧಿಕಾರಿ
ಯಂತ್ರಶ್ರೀ ನಾಟಿ ಮುಖಾಂತರ ಭತ್ತದ ಕೃಷಿ ಉಳಿಸುವ ಮಹತ್ತರ ಕಾರ್ಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಂಡಿದೆ. ಒಂದು ಎಕರೆ ಪ್ರದೇಶವನ್ನು 2 ಗಂಟೆ ಅವಧಿಯಲ್ಲಿ ನಾಟಿ ಪೂರ್ಣಗೊಳ್ಳಲಿದ್ದು ಸಮಯ ಕೂಲಿಯಾಳುಗಳ ಸಂಖ್ಯೆ ಮತ್ತು ಖರ್ಚು ವೆಚ್ಚಗಳಲ್ಲಿ ಉಳಿತಾಯವಾಗಲಿದೆ. ಹೆಬ್ರಿ ತಾಲೂಕಿನಲ್ಲಿ ಈ ವರ್ಷ ಯಂತ್ರಶ್ರೀ ನಾಟಿ ಮೂಲಕ ಕೃಷಿಯಲ್ಲಿ ಅದ್ಬುತ ಸಾಧನೆಯಾಗಲಿದೆ.-ನಾಗರಾಜ ಶೆಟ್ಟಿಉಡುಪಿ ಜಿಲ್ಲಾ ನಿರ್ದೇಶಕರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ