

ಬಿಡದಿ: ನಮಗೆ ಅನ್ಯಾಯವಾಗಿದೆ. ನಮ್ಮ ಭೂಮಿ ನಮಗೆ ಉಳಿಸಿಕೊಡಿ ಎಂದು ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ರೈತರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಳಿ ತಮ್ಮ ಸಮಸ್ಯೆಗಳನ್ನು ತೆರೆದಿಟ್ಟರು.
ಬಿಡದಿ ತೋಟದ ಮನೆಯಲ್ಲಿ ಶನಿವಾರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ ರೈತರು, ನೈಸ್ ಯೋಜನೆಗೆ ಸಂಬಂಧಿಸಿದಂತೆ ಟಿ.ಬಿ.ಜಯಚಂದ್ರ ಅವರ ನೇತೃತ್ವದ ಜಂಟಿ ಸದನ ಸಮಿತಿ ನೀಡಿರುವ ವರದಿಯ ಶಿಫಾರಸುಗಳಂತೆ ಕ್ರಮ ಕೈಗೊಳ್ಳಬೇಕು. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು. ಯೋಜನೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಎಚ್‌ಡಿಕೆ ಬಳಿ ಒತ್ತಾಯಿಸಿದರು.
ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರೀಶಿಲಿಸಿದ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಹಾಲಿ ಸಿಎಂ ನೈಸ್ ಕಂಪನಿಯ ಜತೆ ಸೇರಿ ಅವ್ಯಾಹತವಾಗಿ ಅಕ್ರಮ ಎಸಗಿದ್ದಾರೆ. ನೈಸ್ ಕಂಪನಿ ಗುತ್ತಿಗೆದಾರ ಹಾಗೂ ಡಿಕೆಶಿ ನಡುವೆ ಇರುವ ಸಂಬಂಧ ಏನು ಎಂಬುದು ರಾಜ್ಯದ ಜನರಿಗೆಲ್ಲ ತಿಳಿದಿದೆ ಎಂದರು.
ಬಳಿಕ ನೈಸ್ ಯೋಜನೆಗೆ ಸಂಬಂಧಿಸಿದಂತೆ ನಡೆದಿರುವ ಬೆಳವಣಿಗೆಗಳ ಬಗ್ಗೆ, ಭೂಮಿಯ ಬಳಕೆ ಸ್ವಾಧೀನ ಹಾಗೂ ಟೋಲ್ ಸಂಗ್ರಹ ಸೇರಿದಂತೆ ವಿವಿಧ ವಿಚಾರಗಳ ಕುರಿತು ರೈತರಿಂದ ಮಾಹಿತಿ ಪಡೆದರು. ವಿಧಾನಪರಿಷತ್ ಸದಸ್ಯ ಟಿ.ಎನ್. ಜವರಾಯಗೌಡ, ಮಾಜಿ ಶಾಸಕ ಎ.ಮಂಜುನಾಥ್, ರುದ್ರೇಶ್ ಇದ್ದರು.