

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಯಕ್ಷಗಾನ ಬೆಳೆದರೆ ಧಾರ್ಮಿಕತೆ, ಆಚಾರ-ವಿಚಾರ, ಸಂಸ್ಕೃತಿ, ಸಂಸ್ಕಾರ ಬೆಳೆದಂತೆ. ಅದಕ್ಕಾಗಿ ಯಕ್ಷಗಾನ ಶಾಲೆಗಳನ್ನು ಪ್ರಾರಂಭಿಸುವ ಹಿರಿಯ ಕಲಾವಿದರ ಬೇಡಿಕೆಯನ್ನು ಸರ್ಕಾರದ ಮೂಲಕ ಈಡೇರಿಸಲು ಪ್ರಯತ್ನಿಲಾಗುವುದು. ಡಿಸೆಂಬರ್ ತಿಂಗಳಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ದೊಡ್ಡಮಟ್ಟದಲ್ಲಿ ಮಹಿಳಾ ಯಕ್ಷೋತ್ಸವ ಉಜಿರೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.
ಗೇರುಕಟ್ಟೆ ಮಂಜಲಡ್ಕದಲ್ಲಿ ನಡೆದ ಯಕ್ಷಗಾನ ಅಕಾಡೆಮಿ,ಯಕ್ಷಾರಾಧನ ಕಲಾ ಪ್ರತಿಷ್ಠಾನ ಹಾಗೂ ನಾಳ-ಗೇರುಕಟ್ಟೆ ಇವರ ಸಹಯೋಗದೊಂದಿಗೆ ಯಕ್ಷೋತ್ಸವ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷೋತ್ಸವ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವುದು ಅರ್ಥಪೂರ್ಣವಾಗಿದೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಯಕ್ಷಗಾನ ಕಲಾವಿದ ಹರೀಶ್ ಬೆಳ್ಳಾರೆಯವರನ್ನು ಗೌರವಿಸಲಾಯಿತು.
ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕೃಪಾಪೋಷಿತ ಮೇಳದ ವ್ಯವಸ್ಥಾಪಕ ರಾಘವೇಂದ್ರ ಆಸ್ರಣ್ಣ, ಕಳಿಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಗೇರುಕಟ್ಟೆ, ವೆನ್ಲಾಕ್ ಆಸ್ಪತ್ರೆ ಆರ್.ಎ.ಪಿ.ಸಿ.ಸಿ.ವಿಭಾಗದ ಮುಖ್ಯಸ್ಥ ಡಾ.ಸದಾಶಿವ ರಾವ್, ಕಳಿಯ ಗ್ರಾಮ ಪಂಚಾಯಿತಿ ಸದಸ್ಯರು, ಸಿಎ ಬ್ಯಾಂಕ್ ನಿರ್ದೇಶಕರು, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕ ರಾಘವ ಎಚ್ ಸ್ವಾಗತಿಸಿದರು. ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಬಿ.ಬೆಳಾಲು ವಂದಿಸಿದರು. ಯಕ್ಷಗಾನ ಕಲಾವಿದ ಶಿವಾನಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.