ಸೈನ್ಯ ಶಕ್ತಿ ಜಗಜ್ಜಾಹೀರು : ಸಂಸದ ಕ್ಯಾ.ಬ್ರಿಜೇಶ್ ಚೌಟ ಬಣ್ಣನೆ

New Project (12)
Published on

ವಿಜಯವಾಣಿ ಸುದ್ದಿಜಾಲ ಸುಳ್ಯ

ಆಪರೇಷನ್ ಸಿಂಧೂರ ಮೂಲಕ ಇಡೀ ವಿಶ್ವಕ್ಕೆ ಭಾರತದ ಸೈನಿಕ ಶಕ್ತಿ ತೋರಿಸಿಕೊಡಲು ಸಾಧ್ಯವಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಮಂಥನ ವೇದಿಕೆ ಸುಳ್ಯ ವತಿಯಿಂದ ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ‘ಸಿಂಧೂರ ವಿಜಯ ಭಾರತದತ್ತ ವಿಶ್ವದ ಚಿತ್ತ’ ರಾಷ್ಟ್ರೀಯ ವಿಚಾರಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಬೆಳವಣಿಗೆಯನ್ನು ಸಹಿಸದ ಶಕ್ತಿಗಳು ದೇಶದ ಮೇಲೆ ಭಯೋತ್ಪಾದನೆ ಮೂಲಕ ನಿರಂತರ ದಾಳಿ ಮಾಡುತ್ತಲೇ ಇದ್ದಾರೆ. ಕಾಶ್ಮೀರದಲ್ಲಿ ಪ್ರವಾಸೋದ್ಯಮ ಬೆಳೆಯಬಾರದು, ಅಲ್ಲಿ ಅಭಿವೃದ್ಧಿ ಆಗಬಾರದು ಎಂದು ನಿರಂತರ ದಾಳಿ ನಡೆದಿತ್ತು. ಪಹಲ್ಗಾಮ್‌ನಲ್ಲಿಯೂ ಈ ರೀತಿಯ ಭಯೋತ್ಪಾದನೆ ದಾಳಿ ನಡೆದಿದೆ. ಅದಕ್ಕೆ ತಕ್ಕ ಉತ್ತರ ನೀಡುವ ಮೂಲಕ ಪಾಕ್ ಬೆಂಬಲಿತ ಭಯೋತ್ಪಾದನೆ ವಿರುದ್ಧ ಸ್ಪಷ್ಟ ಸಂದೇಶ ನೀಡಿದೆ ಎಂದರು.

ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಎಒಎಲ್‌ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಆರೆಸ್ಸೆಸ್ ಮುಖಂಡ ನ.ಸೀತಾರಾಮ, ಎಸ್.ಪಿ.ಸುದರ್ಶನ ಸೂರ್ತಿಲ ಮತ್ತಿತರರಿದ್ದರು. ಮಂಥನ ವೇದಿಕೆ ಸಂಚಾಲಕ ಪ್ರದ್ಯುಮ್ನ ಉಬರಡ್ಕ ಸ್ವಾಗತಿಸಿದರು. ಮಧುರಾ ಎಂ.ಆರ್., ಕುಸುಮಾಧರ ಎ.ಟಿ ನಿರೂಪಿಸಿದರು. ಕಿಶನ್ ಜಬಳೆ ವಂದಿಸಿದರು.

ಭಾವಚಿತ್ರ, ವೀಡಿಯೊ ತುಣುಕು ಪ್ರದರ್ಶನ

ಸೇನೆಯಲ್ಲಿರುವಾಗ ಹುತಾತ್ಮರಾದ ಹಾಗೂ ನಿವೃತ್ತರಾದ ಬಳಿಕ ಅಗಲಿದ 30ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ, ಯೋಧರ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು. ಯೋಧರ ಭಾವಚಿತ್ರಗಳಿಗೆ ನಮನ ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಾಯಿತು. ಆಪರೇಷನ್ ಸಿಂಧೂರ ಹೋರಾಟದ ವೀಡಿಯೋ ತುಣುಕು ಪ್ರದರ್ಶಿಸಲಾಯಿತು.

ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆಗೆ ಪ್ರಯತ್ನ

ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು ಭಾರತದ ಈಗಿನ ಸ್ಥಿತಿ ಹಾಗೂ ನಿಲುವುಗಳ ಬಗ್ಗೆ ವಿದೇಶ ರಾಷ್ಟ್ರಗಳು ಗೌರವಿಸುತ್ತವೆ ಮತ್ತು ದೇಶವನ್ನು ಜಾಗತಿಕ ಶಕ್ತಿಯಾಗಿ ಗುರುತಿಸಿವೆ. ದ.ಕ. ಜಿಲ್ಲೆಯಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆಗೆ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಉತ್ತರಿಸಿದರು.

ಭಾರತದ ಈ ನಿಲುವಿಗೆ 193 ರಾಷ್ಟ್ರಗಳ ಪೈಕಿ 3 ರಾಷ್ಟ್ರಗಳನ್ನು ಹೊರತುಪಡಿಸಿ ಬೇರೆ ಯಾವ ದೇಶವೂ ವಿರೋಧ ಮಾಡಿಲ್ಲ. ಭಾರತದ ವಿರುದ್ಧ ನಡೆಯುವ ಯಾವುದೇ ಭಯೋತ್ಪಾದನಾ ದಾಳಿಯನ್ನು ಯುದ್ಧ ಎಂದು ಪರಿಗಣಿಸಿ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಸ್ಪಷ್ಟ ಸಂದೇಶ ನೀಡಿದ್ದೇವೆ. ಜವಾಬ್ದಾರಿಯುತ ರಾಷ್ಟ್ರವಾದ ಭಾರತ ಜವಾಬ್ದಾರಿಯಿಂದ ವರ್ತಿಸಿದೆ. ಅತ್ಯಂತ ನಿಖರವಾಗಿ ಗುರಿ ನಿರ್ಧರಿಸಿ ಆಪರೇಷನ್ ಸಿಂಧೂರ ನಡೆಸಿದೆ. ಕ್ಯಾ.ಬ್ರಿಜೇಶ್ ಚೌಟ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net