87ನೇ ಅಕ್ಷರಜಾತ್ರೆಗೆ ಸಿಂಗಾರಗೊಂಡ ಸಕ್ಕರೆನಾಡು ಮಂಡ್ಯ; ಇಂದು ನಗರಕ್ಕೆ ಸಮ್ಮೇಳನಾಧ್ಯಕ್ಷ ಗೊರುಚ

Madnya Sahitya Sammelana
Published on

ಕೆ.ಎನ್.ರಾಘವೇಂದ್ರ ಮಂಡ್ಯ

ಬರೋಬ್ಬರಿ ಮೂರು ದಶಕಗಳ ಬಳಿಕ ಕಾತರದಿಂದ ಕಾಯುತ್ತಿದ್ದ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಡಿ.20ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆನಾಡು ಮಂಡ್ಯ ಸಜ್ಜಾಗಿದೆ.

ಲಕ್ಷಾಂತರ ಜನರು ಭಾಗಿಯಾಗುವ ಕನ್ನಡದ ಹಬ್ಬಕ್ಕೆ ಅಂತಿಮ ಹಂತದ ಸಿದ್ಧತೆ ನಡೆದಿವೆ. ಮಂಡ್ಯ ನಗರದ 6 ಕಿ.ಮೀ. ದೂರದ ಹೊರವಲಯದಲ್ಲಿ 70 ಎಕರೆ ವಿಸ್ತೀರ್ಣದಲ್ಲಿ ಅಕ್ಷರಜಾತ್ರೆ ಮೇಳೈಸಲಿದೆ. ಸಮ್ಮೇಳನಕ್ಕೆ ದೀಪಾಲಂಕಾರ ಮೆರುಗು ನೀಡಲಿದೆ. ದಸರಾ ಮಾದರಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿ, ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರವಿರಲಿದೆ.

ಇನ್ನು ಸಮ್ಮೇಳನದ ಕರ್ತವ್ಯಕ್ಕೆಂದು ನಿಯೋಜನೆಗೊಂಡಿರುವ ಪೊಲೀಸ್ ಸಿಬ್ಬಂದಿ ಸೇರಿ ಸರ್ಕಾರಿ ಅಧಿಕಾರಿ, ನೌಕರರು ಬುಧವಾರ ರಾತ್ರಿಯೇ ಮಂಡ್ಯಕ್ಕೆ ಆಗಮಿಸಿದ್ದಾರೆ. ನೋಂದಾಯಿತ ಪ್ರತಿನಿಧಿಗಳಿಗೂ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಹಲವು ಹೊಸತನಗಳಿಗೆ ಮಂಡ್ಯ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು. ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರೊಂದಿಗೆ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, 55 ವಸ್ತು ಪ್ರದರ್ಶನ, 350 ವಾಣಿಜ್ಯ ಮತ್ತು 450 ಪುಸ್ತಕ ಮಳಿಗೆ ತೆರೆಯಲಾಗುತ್ತಿದೆ. ಸಾರ್ವಜನಿಕರಿಗೆ ಊಟ ಬಡಿಸಲು 100 ಕೌಂಟರ್, ನೋಂದಾಯಿತ ಪ್ರತಿನಿಧಿಗಳಿಗೆ 40 ಕೌಂಟರ್ ತೆರೆಯಲಾಗಿದ್ದು, ಎಲ್ಲರಿಗೂ ಒಂದೇ ಊಟದ ಮೆನು ಇರಲಿದೆ ಎಂದರು.

ಕೆಆರ್​ಎಸ್ ಡ್ಯಾಂ ಮಾದರಿ ಪ್ರವೇಶದ್ವಾರ: ಸಮ್ಮೇಳನದ ವೇದಿಕೆ ಸ್ಥಳದಲ್ಲಿ ಕೆ.ಆರ್.ಎಸ್ ಅಣೆಕಟ್ಟೆ ಮಾದರಿಯ ಆಕರ್ಷಕ ಪ್ರವೇಶದ್ವಾರವನ್ನು ನಿರ್ಮಾಣ ಮಾಡಲಾಗಿದೆ. ಪ್ರಧಾನ ವೇದಿಕೆಯ ಈ ಪ್ರವೇಶ ದ್ವಾರದ ವಿನ್ಯಾಸವು 40 ಅಡಿ ಎತ್ತರ ಮತ್ತು ಬರೋಬ್ಬರಿ 300 ಅಡಿ ಅಗಲ ಒಳಗೊಂಡಿದೆ. ಸಮ್ಮೇಳನಕ್ಕೆ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಬಾಗಿಲುಗಳನ್ನು ಅಳವಡಿಸಲಾಗಿದೆ. ಈ ಬಾಗಿಲುಗಳು 2020 ಚದರ ಅಡಿ ವಿಸ್ತೀರ್ಣವನ್ನು ಹೊಂದಿವೆ.

ಗೊ.ರು.ಚ. ಅವರಿಗೆ ವಿಶೇಷ ಆತಿಥ್ಯ: 87ನೇ ನುಡಿಜಾತ್ರೆಯ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಡಿ.19ರಂದು ಮಂಡ್ಯಕ್ಕೆ ಆಗಮಿಸಲಿದ್ದಾರೆ. ಸಂಜೆ 4.30ಕ್ಕೆ ನಗರದ ಹೊರವಲಯದಲ್ಲಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತೆಯೇ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ನಿವಾಸಕ್ಕೆ ಕರೆದ್ಯೊಯ್ದು ವಿಶೇಷ ಆತಿಥ್ಯ ನೀಡಲಾಗುವುದು. ಡಿ.20ರಂದು ಬೆಳಗ್ಗೆ 7 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.

ಒದಗಿ ಬರುವ ಅವಕಾಶಗಳನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ನನ್ನ ಪಾಲಕರು ಹೇಳುತ್ತಿದ್ದರು. ಅವರ ಮಾತಿನಂತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನನ್ನಂತ ಸಾಮಾನ್ಯ ವ್ಯಕ್ತಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗುವುದು ಒಂದು ಅದೃಷ್ಟ.

| ಡಾ. ಗೊ.ರು. ಚನ್ನಬಸಪ್ಪ ಹಿರಿಯ ಸಾಹಿತಿ

ಸಮ್ಮೇಳನಾಧ್ಯಕ್ಷ ರಾಗಬೇಕು ಎಂದು ಡಾ. ಗೊ.ರು. ಚನ್ನಬಸಪ್ಪ ಬಯಸಿದವರಲ್ಲ. ಆದರೆ, ಅವರು ತನ್ನಷ್ಟಕ್ಕೆ ತಾನು ತಮ್ಮ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರು. ಅವರ ಸೇವೆ ಗುರುತಿಸಿ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಸಂತಸದ ವಿಚಾರ.

| ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net