ಹೊಸ ತಲೆಮಾರಿನ ಓದುಗರಿಗೆ ಸಾಹಿತ್ಯ ಪರಿಚಯ : ಪೇಜಾವರ ಸದಾಶಿವರಾಯರ ನೆನಪು ಕಾರ್ಯಕ್ರಮದಲ್ಲಿ ಡಾ.ಜನಾರ್ದನ ಭಟ್ ಸಲಹೆ

New Project (44)
Published on

ವಿಜಯವಾಣಿ ಸುದ್ದಿಜಾಲ ಕಟೀಲು

ಕನ್ನಡದ ಮೊದಲ ನವ್ಯ ಕವನ ಬರೆದ ಪೇಜಾವರ ಸದಾಶಿವ ರಾಯರನ್ನು ನೆನಪಿಸುವ ಹಾಗೂ ಅವರ ಸಾಹಿತ್ಯವನ್ನು ಹೊಸ ತಲೆಮಾರಿನ ಓದುಗರಿಗೆ ತಲುಪಿಸುವ ಕೆಲಸಗಳು ಆಗಬೇಕಾಗಿದೆ ಎಂದು ಸಾಹಿತಿ ಡಾ.ಬಿ.ಜನಾರ್ದನ ಭಟ್ ಹೇಳಿದರು.

ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ ವತಿಯಿಂದ ಪೇಜಾವರ ಸದಾಶಿವರಾಯರು ವಾಸವಿದ್ದ ಕಟೀಲಿನ ನೂರ ಇಪ್ಪತ್ತೈದು ವರ್ಷ ಹಿಂದಿನ ಮನೆಯಂಗಳದಲ್ಲಿ ಭಾನುವಾರ ಆಯೋಜಿಸಿದ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಸಾಪ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಮಾತನಾಡಿ, ಹಿಂದೆ ವಿದ್ಯಾವಂತರ ಸಂಖ್ಯೆ ಕಡಿಮೆ ಇದ್ದರೂ ಸಾಹಿತ್ಯ ಚಟುವಟಿಕೆಗಳು ಹೆಚ್ಚು ನಡೆಯುತ್ತಿದ್ದವು. ಈಗ ವಿದ್ಯಾವಂತರು ಹೆಚ್ಚಾಗಿದ್ದರೂ ಕನ್ನಡ ಭಾಷೆ ಸಾಹಿತ್ಯ ಓದುವ ಕೆಲಸ ಕಡಿಮೆಯಾಗಿವೆ ಎಂದರು.

ಪೇಜಾವರರ ಕಥೆಯನ್ನು ಶೈಲಜಾ ಓದಿದರು. ಕವನಗಳನ್ನು ಜ್ಯೋತಿ ಉಡುಪ ಕಟೀಲು, ಉಷಾ ಪ್ರಸಾದ್, ದಿನೇಶ್ ಕೊಡೆತ್ತೂರು ಹಾಡಿದರು. ದ.ಕ. ಜಿಲ್ಲಾ ಕಸಾಪ ಕಾರ್ಯದರ್ಶಿ ವಿನಯಾಚಾರ್ ಅವರು ಸಾಹಿತಿ ಪೇಜಾವರ ಅವರನ್ನು ಸ್ಮರಿಸಿದರು.

ಕಟೀಲು ದೇಗುಲ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ಹೆರಿಕ್ ಪಾಯಸ್, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಹೋಬಳಿ ಘಟಕಾಧ್ಯಕ್ಷ ಜೊಸ್ಸಿ ಪಿಂಟೋ, ಡಾ.ಪುರುಷೋತ್ತಮ ಕೆ.ವಿ., ದೇವು ಹನೆಹಳ್ಳಿ, ಸದಾಶಿವರಾಯರ ಕುಟುಂಬಿಕರಾದ ಪ್ರಭಾಕರ ರಾವ್ ಮತ್ತಿತರರಿದ್ದರು. ರಾಜಶೇಖರ್ ಎಸ್. ನಿರೂಪಿಸಿದರು.

ಸ್ಮಾರಕವನ್ನಾಗಸಿದರೆ ಸಹಕಾರ

ಹಳೆಯ ಮನೆಯಲ್ಲಿ ಕಾಪಿಡಲಾದ ಸಾಹಿತಿ ಪೇಜಾವರರು ಬಳಸುತ್ತಿದ್ದ ಕೊಠಡಿ, ಆಸನಗಳು, ಕಪಾಟುಗಳನ್ನು ಸಾಹಿತ್ಯಾಸಕ್ತರು ವೀಕ್ಷಿಸಿದರು. ಮನೆಯನ್ನು ಪೇಜಾವರರ ಸ್ಮಾರಕವನ್ನಾಗಿಸುವ ಕಾರ್ಯಕ್ಕೆ ಯಾರಾದರೂ ಮುಂದಾದರೆ ಸಹಕಾರ ನೀಡುವುದಾಗಿ ಸದಾಶಿವರಾಯರ ಕುಟುಂಬಿಕರಾದ ಪ್ರಭಾಕರ ರಾವ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net