ಮನಸ್ಸಿನ ನೆಮ್ಮದಿಗಾಗಿ ಮಾಟದ ಮೊರೆ ಹೋಗಿ 4.41 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಮಹಿಳೆ!

maata
Published on

ಬೆಂಗಳೂರು: ಮನಸ್ಸಿನ ನೆಮ್ಮದಿ ಹುಡುಕಿ ಬೆಂಗಳೂರಿನ ಮಹಿಳೆಯೊಬ್ಬರು 4.41 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ!

ಗೀತಾ ಗುರುದೇವ್ ಎಂಬ ತ್ಯಾಜರಾಜನಗರದ ನಿವಾಸಿಗೆ ಇಷ್ಟು ಹಣ ಕಳೆದುಕೊಂಡ ಮೇಲೆ ತಾವು ಮೋಸ ಹೋಗಿದ್ದು ತಿಳಿದಿದ್ದು ಇದೀಗ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಶ್ರೀ ಹಾಗೂ ರಾಕೇಶ್ ಎಂಬುವರನ್ನು ಬಂಧಿಸಿ 1 ಕೆ. ಜಿ‌ ಚಿನ್ನ, 10 ಲಕ್ಷ ನಗದು ಹಾಗೂ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಏಳು ಮಂದಿ ಆರೋಪಿಗಳು ಎಸ್ಕೇಪ್‌ ಆಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ.

ಆಗಿದ್ದೇನು? ಗೀತಾ ಅವರು ಮಾನಸಿಕವಾಗಿ ತುಂಬಾ ನೊಂದಿದ್ದರು. ಅವರು ಮೃದು ಸ್ವಭಾವದವರೂ ಆಗಿದ್ದರು. ಇವರ ಈ ಮಾನಸಿಕ ತೊಳಲಾಟವನ್ನೇ ಬಂಡವಾಳ ಮಾಡಿಕೊಂಡವಳು ಜಯಶ್ರೀ. ಈಕೆ ಗೀತಾ ಮನೆಗೆ ಕೆಲಸಕ್ಕೆ ಬರುತ್ತಿದ್ದಳು. ಗೀತಾ ಅವರ ಸ್ವಭಾವವನ್ನು ಅರಿತ ಜಯಶ್ರೀ ಇವರನ್ನು ಸುಲಭದಲ್ಲಿ ವಂಚಿಸಬಹುದು ಎಂದುಕೊಂಡು ತನಗೆ ಮಾಟ ಮಂತ್ರ ಬರುತ್ತದೆ ಎಂದಿದ್ದಾರೆ.

ನಿಮಗೆ ಯಾರೋ ಏನೋ ಮಾಟ ಮಾಡಿದ್ದಾರೆ. ನೀವು ಹೀಗೆಯೇ ಇದ್ದರೆ ರಕ್ತವಾಂತಿ ಕಾರಿ ಸಾಯಬಹುದು. ಆದ್ದರಿಂದ ಮಾಟ-ಮಂತ್ರ ಮಾಡಿಸಿ ಪೂಜೆ ಮಾಡಿಸಿದರೆ ಕಷ್ಟ ದೂರವಾಗಲಿದೆ ಎಂದಿದ್ದಾಳೆ. ಇದನ್ನು ಗೀತಾ ನಂಬಿಬಿಟ್ಟಿದ್ದಾರೆ.

ಆರಂಭದಲ್ಲಿ 1.42 ಕೋಟಿ ರೂಪಾಯಿ ನೀಡಿದ್ದಾರೆ! ಮಾಟ ಮಂತ್ರಕ್ಕೆ ಬೇಕಾಗುವ ಸಲಕರಣೆಗಳನ್ನು ಹೋಲುವ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟುಹೋದ ಜಯಶ್ರೀ ಕೊನೆಗೆ ಮತ್ತಷ್ಟು ಹಣದ ಬೇಡಿಕೆ ಒಡ್ಡಿದ್ದಾಳೆ. ಹೀಗೆ ಮಾಟ ಮಂತ್ರ ಮಾಡಿಸುವುದಾಗಿ ಹೇಳಿ ಎರಡನೆಯ ಕಂತಿನಲ್ಲಿ 30 ಲಕ್ಷ, ಬಳಿಕ 1.72 ಕೋಟಿ ರೂ. ಪುನಃ 1.90 ಕೋಟಿ ಹೀಗೆ ಹಣ ಪಡೆಯುತ್ತಾ ಹೋಗಿದ್ದಾಳೆ. 13 ವಿವಿಧ ಬ್ಯಾಂಕ್ ಖಾತೆಗಳಿಂದ ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾಳೆ.

ಹೀಗೆ ಹಣ ಕೊಟ್ಟದ್ದು ಒಟ್ಟೂ 4.41 ಕೋಟಿ ರೂಪಾಯಿ ಆಗಿದೆ. ತಾನು ಏನೇನೋ ಮಾಡಿರುವುದಾಗಿ ಜಯಶ್ರೀ ಹೇಳಿದ್ದಾಳೆ. ಮೊದಮೊದಲು ಅದನ್ನು ಗೀತಾ ನಂಬಿದ್ದರೂ ಸಮಸ್ಯೆ ಪರಿಹಾರವಾಗಲಿಲ್ಲ. ನಂತರ ಸಂದೇಹ ಬಂದು ಪತಿಯೊಂದಿಗೆ ಆರೋಪಿಯ ಮನೆಗೆ ತೆರಳಿ ಹಣ ಆಭರಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಜಯಶ್ರೀ ಹಾಗೂ ಆಕೆಯ ಸಹಚರರು ಕೊಲೆ ಬೆದರಿಕೆ ಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ ಗೀತಾ ದಂಪತಿ. ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net