More

    ಆಕೆಯ ನೆನಪು ಮಾಸುವ ಮುನ್ನವೇ ಮದುವೆಮಾಡಿದರು- ಸಂಸಾರ ಮಾಡಲಾಗುತ್ತಿಲ್ಲ, ಪ್ಲೀಸ್‌ ದಾರಿ ತೋರಿ…

    ಆಕೆಯ ನೆನಪು ಮಾಸುವ ಮುನ್ನವೇ ಮದುವೆಮಾಡಿದರು- ಸಂಸಾರ ಮಾಡಲಾಗುತ್ತಿಲ್ಲ, ಪ್ಲೀಸ್‌ ದಾರಿ ತೋರಿ...ನಾನೊಬ್ಬಳನ್ನು ಪ್ರೀತಿಸಿದೆ. ಆದರೆ ಪ್ರೀತಿ ಮನೆಯವರಿಗೆ ಸರಿಕಾಣಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಇಬ್ಬರೂ ವಿಷ ಕುಡಿಯುವ ಯೋಚನೆ ಮಾಡಿದೆವು. ಅವಳು ಹೇಳಿದಂತೆ ಮನೆ ಬಿಟ್ಟು ಬಂದೆ. ಅವಳಿಷ್ಟದಂತೆ ಇಬ್ಬರೂ ವಿಷ ಕುಡಿದೇ ಬಿಟ್ಟೆವು.

    ಮೂರು ದಿನಗಳಾದ ನಂತರ ಆಸ್ಪತ್ರೆಯಲ್ಲಿ ನನಗೆ ಎಚ್ಚರವಾಗಿ ನಾನಿನ್ನೂ ಬದುಕಿದ್ದೇನೆಂದು ತಿಳಿಯಿತು. ಆದರೆ ಆ ನನ್ನ ಹುಡುಗಿ ನಮ್ಮ ಪ್ರೀತಿಗೆ ತನ್ನ ಜೀವವನ್ನು ಬಲಿಕೊಟ್ಟಿದ್ದಳು. ಈ ಘಟನೆಯಿಂದ ನನಗೆ ಚೇತರಿಸಿಕೊಳ್ಳುವುದಕ್ಕೇ ಬಹಳಷ್ಟು ಸಮಯ ಹಿಡಿಯಿತು. ನನ್ನ ಮನೆಯವರು ಅಂತೂ ನನ್ನನ್ನು ಬದುಕಿಸಿಕೊಂಡರು.

    ಈಗ ಒಂದು ವರ್ಷದ ಕೆಳಗೆ ಮತ್ತೊಬ್ಬ ಹುಡುಗಿಯೊಡನೆ ನನಗೆ ಮದುವೆಯನ್ನು ಮಾಡಿಬಿಟ್ಟರು. ಆದರೂ ಮೇಡಂ ನಾನು ಪಾಪಪ್ರಜ್ಞೆಯಿಂದ ನರಳುತ್ತಿದ್ದೇನೆ. ನನ್ನ ಹೆಂಡತಿಯ ಹತ್ತಿರ ಹೋದರೆ ಸಾಕು ನನಗೆ ಅವಳ ನೆನಪಾಗುತ್ತದೆ. ಹೆಂಡತಿಯ ಹತ್ತಿರ ಮೊದಲ ರಾತ್ರಿಯೇ ಎಲ್ಲವನ್ನೂ ಹೇಳಿದ್ದೇನೆ. ಅವಳು ಮಹಾ ಸದ್ಗುಣಿ. ನನ್ನನ್ನು ಕ್ಷಮಿಸಿದ್ದಾಳೆ. ಆದರೆ ನಾನೇ ಪಾಪ ಮಾಡಿದ್ದೇನೆ. ಅವಳ ಜೊತೆ ಸಾಯಲಿಲ್ಲ. ಇವಳ ಜೊತೆ ಬದುಕಲು ಆಗುತ್ತಿಲ್ಲ. ಈಗ ಹೇಳಿ ಮೇಡಂ ಏನು ಮಾಡಲಿ?

    ಉತ್ತರ: ನೀವು ತುಂಬಾ ಉದ್ವಿಗ್ನರಾಗಿ ಪತ್ರ ಬರೆದಿದ್ದೀರಿ. ನಿಮ್ಮ ಪತ್ರದ ಪ್ರತಿಸಾಲಿನಲ್ಲೂ ನಿಮ್ಮ ಮನಸ್ಥಿತಿಯನ್ನು ವಿಶ್ಲೇಷಿಸಿದರೆ ನೀವು ಬುದ್ಧಿಯ ನೆಲೆಯಲ್ಲಿ ಚಿಂತಿಸಿ ತೀರ್ಮಾನ ತೆಗೆದುಕೊಳ್ಳಬೇಕಾದ ಎಡೆಯಲ್ಲೆಲ್ಲಾ ಭಾವದ ನೆಲೆಯಲ್ಲಿ ಚಿಂತಿಸಿ ತೀರ್ಮಾನ ಮಾಡಿದ್ದೀರಿ. ಆದ್ದರಿಂದಲೇ ಇಂಥ ಸಂಕಷ್ಟಕ್ಕೆ ಸಿಲುಕಿದ್ದೀರಿ. ಈಗಲೂ ಕಾಲಮಿಂಚಿಲ್ಲ. ನಿಮ್ಮ ಬದುಕನ್ನು ಮತ್ತೆ ಪುನರ್ ವಿಮರ್ಶೆಗೆ ಒಳಪಡಿಸಿ, ಸರಿಯಾಗಿ ವಿಶ್ಲೇಷಣೆ ಮಾಡಿ ನೋಡಿ ಬದುಕುವ ಮತ್ತು ನೆಮ್ಮದಿಯ ದಾರಿಗಳು ತಾನೇ ತಾನಾಗಿ ಹೊಳೆಯುತ್ತವೆ. ಈಗ ವಿಶ್ಲೇಷಣೆಯನ್ನು ಹೀಗೆ ಪ್ರಾರಂಭಿಸೋಣ.

    1. ನೀವು ಮತ್ತು ಪ್ರೇಯಸಿ ಪ್ರೌಢರಾಗಿದ್ದೀರಿ. ಮನೆಯವರು ಹೆದರಿಸಿದರೆ ಕಾನೂನಿನ ನೆರವು ಪಡೆಯಬಹುದಿತ್ತಲ್ಲ? ಎಷ್ಟೋ ಹಳ್ಳಿಯ ಹೆಣ್ಣುಮಕ್ಕಳು ಪೊಲೀಸ್​ ಸ್ಟೇಷನ್‍ನಲ್ಲಿ ಮದುವೆಯಾಗಿರುವುದು ಟಿವಿಯಲ್ಲಿ, ಪೇಪರ್​ನಲ್ಲಿ ಬರುತ್ತಿರುತ್ತದೆಯಲ್ಲವೇ? ನಿಮಗೂ ವಿವಾಹವಾಗಲು ಹಲವಾರು ದಾರಿಗಳಿತ್ತು. ಸ್ನೇಹಿತರ ಸಹಾಯ ಪಡೆಯಬಹುದಿತ್ತು. ಕೇವಲ ಸಿನಿಮಾದ ಮಾದರಿಯಲ್ಲಿ ಸಮಸ್ಯೆಯಿಂದ ಓಡುವ ಅಗತ್ಯವಿರಲಿಲ್ಲ. ಇರಲಿ ಆದುದಾಯಿತು.

    2. ಅವರು ನಿಮ್ಮನ್ನು ಹುಡುಕಿಕೊಂಡು ಬಂದರು. ಆಗಲೂ ಬದುಕುವ ಹಲವಾರು ದಾರಿಗಳಿದ್ದವು. ಅವರು `ಸಾಯೋಣ’ ಎಂದರು ನೀವು `ಸರಿ’ ಎಂದಿರಿ! ಇವೆಲ್ಲವೂ ಕೇವಲ ಭಾವದ ನೆಲೆಯಲ್ಲವೇ? ಆಗಲಾದರೂ ನಿಮ್ಮ ಜಾಣತನವನ್ನು ಉಪಯೋಗಿಸಬಹುದಿತ್ತು. ಅವರು ತೀರಾ ಖಿನ್ನತೆಯಲ್ಲಿದ್ದಿರಬಹುದು. ಅವರನ್ನು ವೈದ್ಯರಿಗೆ ತೋರಿಸಬಹುದಿತ್ತು. ಆ ತೀವ್ರಭಾವದ ಘಳಿಗೆಯನ್ನು ತಪ್ಪಿಸಿದ್ದರೆ ಇಬ್ಬರೂ ವಿಷಕುಡಿಯುವ ಪ್ರಸಂಗವೇ ಬರುತ್ತಿರಲಿಲ್ಲ ಅಲ್ಲವೇ?

    3. ಪ್ರತಿಹಂತದಲ್ಲೂ ಅವರು ಹೇಳುವುದು ನೀವು ಕೇಳುವುದು ಇದೇ ನಡೆದಿದೆಯಲ್ಲ? ಓಡಿಹೋಗು ಎಂದರು ಓಡಿಹೋದಿರಿ, ನಾನೂ ನಿನ್ನ ಜೊತೆಗೆ ಬರುತ್ತೇನೆಂದರೆ ಕರೆದುಕೊಂಡು ಹೋದಿರಿ, ವಿಷ ಕುಡಿಯೋಣವೆಂದರು ಕುಡಿದಿರಿ. ಅಂದರೆ ಅವರು ಆಡಿಸಿದಂತೆ ಕೋಲೆಬಸವನ ಹಾಗೆ ನೀವು ಆಡಿದಿರಿ. ಅಂದಮೇಲೆ ಈಗ ಆಗಿರುವ ತಪ್ಪುಗಳಿಗೆ ಆಡಿಸಿದ ಅವರು ಕಾರಣರೋ ಅಥವಾ ಆಡಿದ ನೀವು ಕಾರಣರೋ? ಬುದ್ಧಿಯ ನೆಲೆಯಲ್ಲಿ ಯೋಚಿಸಿ. ಅವರು ನಿಮ್ಮಿಂದ ತಪ್ಪುಗಳನ್ನು ಮಾಡಿಸಿದರು ಪಶ್ಚಾತ್ತಾಪದ ಹೊಣೆಗೆ ಸಿಕ್ಕದಂತೆ ಜಗತ್ತಿನಿಂದಲೇ ದೂರಾಗಿ, ಎಲ್ಲವನ್ನು ಪಾರುಮಾಡಿಕೊಂಡು ಬಿಟ್ಟರು. ಈಗ ನೀವು ಮಾಡದ ತಪ್ಪಿಗೆ ಹೊಣೆಹೊತ್ತುಕೊಂಡು ಬದುಕನ್ನು ನರಕ ಮಾಡಿಕೊಳ್ಳುತ್ತಿದ್ದೀರಿ.

    4. ಆಕೆಯ ಸಾವಿನ ನಂತರವೂ ನೀವು ಮತ್ತೊಬ್ಬರು ನಡೆಸಿದಂತೆ ನಡೆಯುವುದನ್ನು ಬಿಡಲಿಲ್ಲ. ನಿಮ್ಮ ಮನೆಯವರು ನಿಮಗೆ ಮತ್ತೊಂದು ಮದುವೆ ಮಾಡಿದರು. ನೀವು ಮಾಡಿಕೊಂಡಿರಿ. ಈಗ ನಿಧಾನವಾಗಿ ಯೋಚಿಸಿ. ನಡೆದ ಘಟನೆಗಳಲ್ಲಿ ನಿಮ್ಮದು ಎಷ್ಟು ತಪ್ಪಿದೆ ಮತ್ತೊಬ್ಬರದು ಎಷ್ಟು ತಪ್ಪಿದೆ ಎಂದು.

    5. ಆದರೂ ನಿಮಗೊಂದು ಸುವರ್ಣಾವಕಾಶವಿದೆ. ಹೇಗೂ ನೀವು ಬೇರೆಯವರು ಹೇಳಿದ್ದನ್ನು ಕಣ್ಣುಮುಚ್ಚಿಕೊಂಡು ಪಾಲಿಸುತ್ತೀರಲ್ಲ? ಈಗಲೂ ಹಾಗೇ ಮಾಡಿ. ನಿಮ್ಮ ಸುದೈವದಿಂದ ನಿಮಗೆ ಸದ್ಗುಣಿ ಹೆಂಡತಿ ಸಿಕ್ಕಿದ್ದಾರೆ. ಅವರು ಅಗ್ನಿಸಾಕ್ಷಿಯಾಗಿ ನಿಮ್ಮ ಕೈ ಹಿಡಿದಿದ್ದಾರೆ. ಇನ್ನು ಮುಂದೆ ನೀವು ಆಕೆ ಹೇಳಿದಂತೆ ಕೇಳಿ ಸಾಕು. ನಿಮ್ಮ ಬದುಕು ಬಂಗಾರವಾಗುತ್ತದೆ. ನಿಮ್ಮ ಮೊದಲ ಹುಡುಗಿ ನಿಮ್ಮನ್ನು ಸಾವಿನ ಕಡೆ ತಳ್ಳಿದ್ದರು. ಈ ಹುಡುಗಿ ನಿಮ್ಮನ್ನು ಖಂಡಿತ ಬದುಕಿನ ಕಡೆಗೆ ನಡೆಸುತ್ತಾರೆ. ನಡೆದು ಹೋದದ್ದೆಲ್ಲ `ಕಸ’ದಂತೆ. ತಲೆಯಿಂದ ತೆಗೆದು ಆಚೆ ಎಸೆಯಬೇಕು. ಹೊಸ ಬದುಕಿಗೆ ಮುಖಾಮುಖಿಯಾಗಬೇಕು. ದೇವರು `ಈ ಹೆಂಡತಿಯಿಂದ ಮಕ್ಕಳು ಪಡೆದು ಸುಖವಾಗಿ ಬಾಳಲಿ’ ಎಂದು
    ನಿಮ್ಮನ್ನು ಬದುಕಿಸಿದ್ದಾನೆ ಎಂದು ಕೊಳ್ಳಿ. ಆಗ ಪ್ರತಿದಿನವೂ ಹೊಸದಿನವಾಗಿ ಕಾಣಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts