

ಮೈಸೂರು: ಮೊದಲು ಯುವತಿಯೊಬ್ಬಳನ್ನು ಪ್ರೀತಿಸಿ ನಂತರ ಬೇರೊಬ್ಬಳನ್ನು ವಿವಾಹವಾದ ಕಾರಣಕ್ಕೆ ಮೈಸೂರಿನಲ್ಲಿ ಎರಡು ಸಾವು ನಡೆದಿರುವ ದುರದೃಷ್ಟಕರ ಘಟನೆ ಸಂಭವಿಸಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊಂಬಾಳೆ ಕೊಪ್ಪಲು ಗ್ರಾಮದ 39 ವರ್ಷದ ಎಚ್.ಎಂ.ಲೋಕೇಶ್ ಹಾಗೂ ಅಮೂಲ್ಯ ಎಂಬ ಯುವತಿಯ ಪ್ರೇಮ ಪ್ರಕರಣ ಸಾವಿನಲ್ಲಿ ಕೊನೆಯಾಗಿದೆ. ಮೈಸೂರಿನ ಕಾಲೇಜಿನಲ್ಲಿ ಎಂಎಸ್‍ಸಿ ಕಲಿಯುತ್ತಿದ್ದ ಯುವತಿಯನ್ನು ಕೊಲೆ ಮಾಡಿ ಲೋಕೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಗಿದ್ದೇನೆಂದರೆ ಪ್ರಥಮ ದರ್ಜೆ ಗುತ್ತಿಗೆದಾರಾಗಿದ್ದ ಲೋಕೇಶ್ ಮತ್ತು ಅಮೂಲ್ಯ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಅವರು ಬೇರೆ ಮದುವೆಯಾಗಿದ್ದಾರೆ. ಅವರಿಗೆ ಒಬ್ಬಳು ಮಗಳು ಕೂಡ ಇದ್ದಾಳೆ. ಆದರೆ ತಾನು ಪ್ರೀತಿಸಿದ ಹುಡುಗ ಬೇರೊಬ್ಬಳನ್ನು ಮದುವೆಯಾಗಿದ್ದು ಅಮೂಲ್ಯಳಿಗೆ ಸಹಿಸದಾಗಿದೆ. ಆದ್ದರಿಂದ ಆಕೆ ಪದೇ ಪದೇ ಪತ್ನಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಇದೇ ಕಾರಣಕ್ಕೆ ಅತ್ತ ಪತ್ನಿಯನ್ನು ಬಿಟ್ಟುಬರಲಾರದೇ, ಇತ್ತ ಈಕೆಯ ಕಾಟ ತಾಳಲಾರದೇ ರೋಸಿಹೋದ ಲೋಕೇಶ್, ಮೈಸೂರಿನ ಹೊರವಲಯದ ಹೋಟೆಲ್ಗೆ ಬರುವಂತೆ ಅಮೂಲ್ಯಳಿಗೆ ಹೇಳಿದ್ದಾರೆ. ಆಕೆ ಅಲ್ಲಿಗೆ ಬಂದಾಗ ಅವರಿಬ್ಬರ ನಡುವೆ ಏನು ಮಾತುಕತೆ ನಡೆದಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಆಕೆಯ ಕತ್ತನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ.
ಆಕೆಯ ಶವ ಸಾಗಿಸಲು ತನ್ನ ಸ್ನೇಹಿತನ ನೆರವು ಕೋರಿದ್ದಾರೆ ಲೋಕೇಶ್. ಆದರೆ ಸ್ನೇಹಿತ ಒಪ್ಪಲಿಲ್ಲ. ಆದರೆ ಆ ಸ್ನೇಹಿತ ಇನ್ನೊಬ್ಬನ ಜತೆಗೂಡಿ ಹೋಟೆಲ್ಗೆ ಬಂದಾಗ ರೂಮ್ನ ಬಾಗಿಲು ಹಾಕಲಾಗಿದ್ದು, ಅನುಮಾನಗೊಂಡು ಬೀಗ ತೆಗೆಸಿದಾಗ ಲೋಕೇಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.