

ವಿಜಯಪುರ: ಕಳೆದ ಕೆಲವು ತಿಂಗಳುಗಳ ಹಿಂದೆ ವಿಜಯಪುರ ಸರ್ಕಾರಿ ಆಸ್ಪತ್ರೆ ಆವರಣದಿಂದ ಮಗು ಕಳುವಾಗಿತ್ತು. ಇದು ಭಾರಿ ಆತಂಕವನ್ನು ಸೃಷ್ಟಿ ಮಾಡಿತ್ತು. ಇದರ ಬೆನ್ನಲ್ಲೇ ಹಲವಾರು ಮಕ್ಕಳ ಅಕ್ರಮ ಕಳ್ಳ ಸಾಗಣೆ ಮಾಡುತ್ತಿರುವ ಅನುಮಾನ ಶುರುವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೂರು ಕೂಡ ದಾಖಲಾಗಿತ್ತು. ದೂರಿನ ಇದರ ಬೆನ್ನಟ್ಟಿ ಹೋದ ಪೊಲೀಸರಿಗೆ ಕಂಡದ್ದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಜಿಗಜಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ್ ಆಗಿರುವ ಜಯಮಾಲಾ!
ವಿಜಯಪುರ ನಗರದ ಅಥಣಿ ಗಲ್ಲಿಯ ನಿವಾಸಿಯಾಗಿರುವ ಜಯಮಾಲಾ ಬಿಜಾಪುರ ವಿರುದ್ಧ ಅನಾಥ ಮಕ್ಕಳನ್ನು ಅಕ್ರಮವಾಗಿ ಪೋಷಣೆ ಮಾಡುತ್ತಿರುವ ಬಗ್ಗೆ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಮಕ್ಕಳ ಸಹಾಯ ವಾಣಿ ಯೋಜನಾ ನಿರ್ದೇಶಕಿ ಸುನಂದಾ ತೋಳಬಂದಿ ದೂರು ದಾಖಲಿಸಿದ್ದರು. ಈ ಕುರಿತು ಜಯಮಾಲಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ತನಿಖೆಯ ವೇಳೆ ಐದು ಮಕ್ಕಳನ್ನು ಸಾಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ತನ್ನ ಮನೆಯಲ್ಲಿ ಹಾಗೂ ಇತರರ ಬಳಿ ಒಟ್ಟು ಐದು ಮಕ್ಕಳನ್ನು ಅನಧಿಕೃತವಾಗಿ ಜಯಮಾಲಾ ಬಿಜಾಪುರ ಸಾಕುತ್ತಿದ್ದು, ಅದರಲ್ಲಿ ಐದು ವರ್ಷದ ಗಂಡು ಮಗು, ಮೂರು ವರ್ಷದ ಹೆಣ್ಣು ಮಗುವನ್ನು ತನ್ನ ಮನೆಯಲ್ಲೇ ಸಾಕಿದ್ದಾಳೆ. ಅಲ್ಲದೇ ಮೂರು ವರ್ಷದ ಹೆಣ್ಣು ಮಗುವನ್ನು ನಗರದ ದರಬಾರ್ ಗಲ್ಲಿಯ ಶಾಂತಮ್ಮ ಹೆರಕಲ ಎಂಬುವರ ಬಳಿ ಇಟ್ಟಿದ್ದು, ಮಗುವಿನ ಪಾಲನೆಗಾಗಿ ಪ್ರತಿ ತಿಂಗಳು ರೂ. 3000 ಹಣ ನೀಡುತ್ತಿದ್ದಳು ಎನ್ನಲಾಗಿದೆ.
ಒಟ್ಟು ಐದು ಮಕ್ಕಳನ್ನು ಅನಧಿಕೃತವಾಗಿ ಸಾಕಾಣಿಕೆ, ಸಾಗಾಣಿಕೆ ಮಾಡಿರುವ ಜಯಮಾಲಾ ಬಿಜಾಪುರ ಅನಧಿಕೃತವಾಗಿ ಮಕ್ಕಳ ಸಾಕಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದಳಾ ಎಂಬ ಸಂಶಯ ಬಂದಿದ್ದು, ಪೊಲೀಸರ ತನಿಖೆಯಿಂದ ಮತ್ತಷ್ಟು ರಹಸ್ಯಗಳು ಬಹಿರಂಗವಾಗಬೇಕಿದೆ. ಸದ್ಯ ಈ ಪ್ರಕರಣವನ್ನು ವಿಜಯಪುರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆ ನಡೆಯುತ್ತಿದೆ.
ಈಕೆಯನ್ನು ಬಂಧಿಸುತ್ತಿರುವುದನ್ನು ವಿಡಿಯೋ ಮಾಡುವ ಸಂದರ್ಭದಲ್ಲಿ ನರ್ಸ್ ಜಯಮಾಲಾ ಹೈಡ್ರಾಮಾ ಮಾಡಿದ್ದಾಳೆ. ಮಾಧ್ಯಮದವರು ವಿಡಿಯೋ ಚಿತ್ರೀಕರಿಸದಂತೆ ರಂಪಾಟ ಮಾಡಿದ್ದಾಳೆ. ಚಿತ್ರೀಕರಣ ಮಾಡದಂತೆ ಮಾಧ್ಯಮದವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾಳೆ.
ಈಕೆಯನ್ನು ಬಂಧಿಸಿದ ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ. ಐದು ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ತಾಯಿಯಿಂದ ಪ್ರತ್ಯೇಕ, ಪೋಷಕರಿಂದ ದೂರವಾದ ಮಕ್ಕಳನ್ನು ಅನಧಿಕೃತವಾಗಿ ಸಾಕಿದ್ದ ಈಕೆ, ಅದನ್ನು ನಂತರ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಳು.
ಸದ್ಯ ಮನೆಯಲ್ಲಿ 5 ವರ್ಷದ ಗಂಡು ಹಾಗೂ 3 ವರ್ಷದ ಹೆಣ್ಣು ಮಗುವನ್ನು ಸಾಕಿದ್ದಳು. ನಗರದ ದರಬಾರ್ ಗಲ್ಲಿಯ ಶಾಂತಮ್ಮ ಹೆರಕಲ್ ಬಳಿ 3 ವರ್ಷದ ಹೆಣ್ಣು ಮಗು, ಅಥಣಿ ಗಲ್ಲಿಯ ಚಂದ್ರಮ್ಮ ಮಾದರ ಬಳಿ 11 ತಿಂಗಳ ಹೆಣ್ಣು ಮಗುವನ್ನು ಬಿಟ್ಟಿದ್ದಳು. ಜಯಮಾಲಾ ಮನೆಯಲ್ಲಿನ 2 ಹಾಗೂ ಇತರಿಬ್ಬರ ಮನೆಯಲ್ಲಿದ್ದ 2 ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. 5 ವರ್ಷದ ಹೆಣ್ಣು ಮಗು ಸೊಲ್ಲಾಪುರದ ಕುಟುಂಬವೊಂದಕ್ಕೆ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ.