ಪತ್ನಿಯನ್ನು ಎಟಿಎಂನಂತೆ ಬಳಸಿಕೊಳ್ಳುವುದು ಮಾನಸಿಕ ಕ್ರೌರ್ಯ: ಹೈಕೋರ್ಟ್​ ಕೊಟ್ಟಿತು ಡಿವೋರ್ಸ್​

HC
Published on

ಬೆಂಗಳೂರು: ಪತಿ ಹೆಸರಿಗೆ ಮಾತ್ರ ಪತಿಯಾಗಿದ್ದು, ಹಣಕ್ಕಾಗಿ ಪತ್ನಿಯನ್ನು ಪೀಡಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ. ದಂಪತಿ ನಡುವೆ ಯಾವುದೇ ಭಾವನಾತ್ಮಕ ಸಂಬಂಧ ಇಲ್ಲದಿದ್ದರೂ, ಪತ್ನಿಯನ್ನು ಗಂಡನಾದವ ಹಣದ ಹಸುವಿನಂತೆ ಅಥವಾ ಆಕೆಯನ್ನು ಎಟಿಎಂನಂತೆ ನಡೆಸಿಕೊಳ್ಳುವುದು ಆಕೆಗೆ ನೀಡುವ ಮಾನಸಿಕ ಕಿರುಕುಳಕ್ಕೆ ಸಮ ಎಂದು ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ತನ್ನಿಂದ ಪದೇ ಪದೇ ಹಣ ಕೇಳುತ್ತಿದ್ದ ಪತಿಯ ವಿರುದ್ಧ ಮಹಿಳೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

1991 ರಲ್ಲಿ ಈ ದಂಪತಿಯ ಮದುವೆಯಾಗಿತ್ತು. ಪತಿಗೆ ಮೈತುಂಬಾ ಸಾಲ ಇತ್ತು. ಇದೇ ಕಾರಣಕ್ಕೆ ದಿನವೂ ಮನೆಯಲ್ಲಿ ಜಗಳವಾಗುತ್ತಿತ್ತು. ಜೀವನ ನಿರ್ವಹಣೆಗೆಂದು ಪತ್ನಿ ಬ್ಯಾಂಕ್​ ಉದ್ಯೋಗಕ್ಕೆ ಸೇರಿದರು. 2008ರಲ್ಲಿ ದುಬೈಗೆ ಹೋದ ಪತಿ, ಅಲ್ಲಿ ಸಲೂನ್​ ತೆರೆಯಲು ಪತ್ನಿಯಿಂದ 60 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಆದರೆ ವಿಪರೀತ ನಷ್ಟ ಅನುಭವಿಸಿ ಭಾರತಕ್ಕೆ ವಾಪಸ್​ ಆಗಿದ್ದರು. ಆದರೆ ಪುನಃ ಹಣಕ್ಕಾಗಿ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ವ್ಯಾಪಾರ ನಡೆಸುವ ನೆಪದಲ್ಲಿ ಪತ್ನಿಯಿಂದ 60 ಲಕ್ಷ ರೂಪಾಯಿ ಹಣವನ್ನು ಪತಿ ಪಡೆದುಕೊಂಡಿದ್ದಾರೆ. ಹೀಗೆ ಪದೇ ಪದೇ ತಮ್ಮಿಂದ ಹಣ ಕೇಳುತ್ತಿದ್ದು, ಇದರಿಂದ ಬೇಸತ್ತಿರುವುದಾಗಿ ಪತ್ನಿ ಕೋರ್ಟ್​ಗೆ ಹೇಳಿದ್ದರು. ಹೀಗೆ ಪದೇ ಪದೇ ಹಣ ಕೇಳಿದ ಮಾತ್ರಕ್ಕೆ ವಿಚ್ಛೇದನ ನೀಡಲಾಗದು ಎಂದು ಕೌಟುಂಬಿಕ ಕೋರ್ಟ್​ ಆದೇಶಿಸಿತ್ತು. ಈ ಆದೇಶದ ವಿರುದ್ಧ ಮಹಿಳೆ ಹೈಕೋರ್ಟ್​ ಮೊರೆ ಹೋಗಿದ್ದರು. ಪತಿ ಮಹಿಳೆಯೊಂದಿಗೆ ಯಾವುದೇ ಭಾವನಾತ್ಮಕ ಬಾಂಧವ್ಯವನ್ನು ಹೊಂದಿಲ್ಲ. ಕೇವಲ ಯಾಂತ್ರಿಕವಾಗಿ ಪತಿಯ ಪಾತ್ರವನ್ನು ಪೋಷಿಸಿದ್ದಾರೆ. ಪತಿಯಿಂದ ಪತ್ನಿಗೆ ಆಗಿರುವ ನೋವು, ಮಾನಸಿಕ ಕಿರುಕುಳ ಎಂದು ಪರಿಗಣಿಸಬಹುದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವ್ಯಾಪಾರ ನಡೆಸುವ ನೆಪದಲ್ಲಿ ಪತ್ನಿಯಿಂದ 60 ಲಕ್ಷ ರೂಪಾಯಿ ಹಣವನ್ನು ಪತಿ ಪಡೆದುಕೊಂಡಿದ್ದಾರೆ. ಆಕೆಯನ್ನು ಆತ ಕೇವಲ ಹಣ ನೀಡುವ ಎಟಿಎಂ ಆಗಿ ಬಳಸಿಕೊಂಡಿದ್ದಾರೆ. ಗಂಡನ ಈ ವರ್ತನೆ ಮಾನಸಿಕ ಕಿರುಕುಳಕ್ಕೆ ಸಮ ಎಂದ ಕೋರ್ಟ್​, ವಿಚ್ಛೇದನಕ್ಕೆ ಆದೇಶಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net