

ಕೆಂಟುಕಿ (ಅಮೆರಿಕ): ತಾನು ಜಗತ್ತನ್ನೇ ಆಳಬಲ್ಲೆ, ತನ್ನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ, ತಾನು ಕಂಡುಹಿಡಿಯಲು ಸಾಧ್ಯವಾಗದೇ ಇರುವುದು ಈ ಭೂಮಿಯ ಮೇಲೆಯೇ ಇಲ್ಲ ಎಂದು ಮನುಷ್ಯ ಎಷ್ಟೇ ತನ್ನನ್ನು ತಾನು ಹೊಗಳಿಕೊಂಡರೂ, ಮನುಷ್ಯನ ಊಹೆಗೂ ಮೀರಿದ ನಿಗೂಢ ಜಗತ್ತೊಂದು ನಮ್ಮ ಸುತ್ತಲೂ ಸುತ್ತುತ್ತಲೇ ಇವೆ. ಅದೆಷ್ಟೋ ರಹಸ್ಯಮಯ ವಿಷಯಗಳನ್ನು ಭೇದಿಸಲು ಮನುಷ್ಯನಿಂದ ಇದುವರೆಗೂ ಸಾಧ್ಯವಾಗಿಯೇ ಇಲ್ಲ, ಕೆಲವೊಂದು ಘಟನೆಗಳಿಗೆ ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆ ನೀಡಬಹುದಾದರೂ ಅದು ನಿಜವೇ, ಅಲ್ಲವೇ ಎಂಬುದು ಮಾತ್ರ ನಿಗೂಢವಾಗಿಯೇ ಉಳಿಯತ್ತವೆ.
ಅಂಥವುಗಳಲ್ಲಿ ಒಂದು ಆತ್ಮ, ಪ್ರೇತ, ಭೂತ-ಪಿಶಾಚಿಯ ಅಸ್ತಿತ್ವ. ಇದನ್ನು ನಂಬದ ದೊಡ್ಡ ವರ್ಗವೇ ಇದೆ, ಇವುಗಳ ಇರುವಿಕೆಯ ಕುರಿತು ವೈಜ್ಞಾನಿಕವಾಗಿ ಸಾಬೀತು ಮಾಡದೇ ಇದ್ದರೂ, ಇವುಗಳ ಇರುವಿಕೆಯ ಕುರಿತು ತಮ್ಮ ಅನುಭವಕ್ಕೆ ಬಂದಿದೆ ಎಂದು ಹೇಳುವವರೂ ಇದ್ದಾರೆ. ದೇವರ ಅಸ್ತಿತ್ವದ ಕುರಿತು ಪರ-ವಿರೋಧಗಳು ಇರುವಂತೆಯೇ ಆತ್ಮ, ಪ್ರೇತ, ಭೂತ-ಪಿಶಾಚಿಯ ಅಸ್ತಿತ್ವದ ಕುರಿತೂ ಇವೆ.
ಅದೇನೆ ಇದ್ದರೂ, ಅಮೆರಿಕದ ಕೆಂಟುಕಿ ಮನೆಯೊಂದರ ಮುಂದೆ ನಡೆದ ಈ ಘಟನೆ ಮಾತ್ರ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯವನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ ಸ್ಥಳೀಯರು. ನಿಗೂಢವಾಗಿರುವ ಆಕೃತಿಯೊಂದು ಮನೆಯ ಎದುರಿಗೆ ನಿಲ್ಲಿಸಿರುವ ಕಾರಿನ ಸಮೀಪ ಸುತ್ತುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಮನುಷ್ಯನ ಆಕೃತಿಯನ್ನು ಹೋಲುವ ಒಂದು ಆಕೃತಿಯು ಸಂಚರಿಸುವುದನ್ನು ಕಾಣಬಹುದಾಗಿದೆ.
ಇಲ್ಲಿಯ ಪ್ಯಾರಾನಾರ್ಮಲಿಟಿ ಮ್ಯಾಗಜೀನ್, ಟ್ವಿಟರ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದೆ. 33 ಸೆಕೆಂಡ್ಗಳ ಈ ವಿಡಿಯೋದಲ್ಲಿ ಮಸುಕಾದ, ಮಾನವನಂತಿರುವ ಆಕೃತಿ ಓಡಾಡುವುದನ್ನು ನಾವು ನೋಡಬಹುದು. ಆಡಿಯೋದಲ್ಲಿ, ಒಬ್ಬ ವ್ಯಕ್ತಿ "ನೀವು ಅವನ ಮುಖವನ್ನು ಸ್ಪಷ್ಟವಾಗಿ ನೋಡಬಹುದು" ಎಂದು ಹೇಳುವುದು ಕೇಳಿಸುತ್ತದೆ.
ಇದರ ಬಗ್ಗೆ ಪರ- ವಿರೋಧಗಳ ಚರ್ಚೆ ಆರಂಭವಾಗಿದೆ. ಈ ವಿಡಿಯೋ ಯಾರೋ ಬೇಕಂತಲೇ ಮಾಡಿದಂತೆ ಕಾಣಿಸುತ್ತಿದೆ. ಏಕೆಂದರೆ ವಿಡಿಯೋ ಚಲಿಸುವಂತೆ ಕಾಣಿಸುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ ಇನ್ನು ಹಲವರು ನಮಗೆ ಅರಿವಿಲ್ಲದ ಎಷ್ಟೋ ಸಂಗತಿಗಳು ನಡೆಯುತ್ತವೆ. ಇದು ಕೂಡ ಅಂಥದ್ದೇ ಒಂದು ಎಂದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋದ ಹಿಂದೆ ಸಂಶೋಧಕರು ಬಿದ್ದಿದ್ದು, ಅಂತಿಮವಾಗಿ ಇದರ ಬಗ್ಗೆ ಯಾವ ನಿರ್ಧಾರ ತಾಳುತ್ತಾರೋ ಕಾದು ನೋಡಬೇಕಿದೆ. (ಏಜೆನ್ಸೀಸ್)
ಇಲ್ಲಿದೆ ನೋಡಿ ವಿಡಿಯೋ: