

ಉಳ್ಳಾಲ (ದಕ್ಷಿಣ ಕನ್ನಡ): ಇವರ ಹೆಸರು ಅರ್ಥರ್ ಸುನಿಲ್ ಕುವೆಲ್ಲೊ. ಮೊನ್ನೆ ಭಾನುವಾರ ಮಧ್ಯರಾತ್ರಿ ಮೀನುಗಾರಿಕೆಗೆ ಹೋಗಿದ್ದರು. ಆದರೆ ದುರದೃಷ್ಟವಶಾತ್ ಭಯಾನಕ ಬಿರುಗಾಳಿ ಬಂದು ಇವರು ಇದ್ದ ಬೋಟ್ ನಾಪತ್ತೆಯಾಗಿಹೋಯಿತು.
45 ವರ್ಷದ ಅರ್ಥರ್ ಅವರಿಗೆ ಶೋಧ ಕಾರ್ಯ ನಡೆದರೂ ಅವರು ಸಿಕ್ಕಿರಲಿಲ್ಲ. ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೊಡಗಿಸಿಕೊಂಡಿದ್ದಾಗ ಈ ದುರ್ಘಟನೆ ನಡೆದಿತ್ತು. ಪರ್ಸಿನ್ ಬೋಟ್‌ನಲ್ಲಿ ಉಳ್ಳಾಲ ಉಳಿಯದ 29 ಮಂದಿ ಮೀನುಗಾರಿಕೆಗೆ ತೆರಳಿದ್ದರು.
ಉಳಿದವರು ಹೇಗೋ ಪ್ರಾಣಾಪಾಯದಿಂದ ಪಾರಾಗಿದ್ದರೂ ಅರ್ಥರ್ ಅವರು ನಾಪತ್ತೆಯಾಗಿದ್ದರು. ನಿನ್ನೆ ಮಧ್ಯಾಹ್ನದ ಹೊತ್ತಿಗೆ ಈ ಬೋಟ್ನ ಬೆಲ್ಟ್ ತುಂಡಾಗಿದ್ದ ಸ್ಥಿತಿಯಲ್ಲಿ ಸಿಕ್ಕಿತ್ತು. ಸಮುದ್ರಕ್ಕೆ ಬೀಸಿದ್ದ ಬಲೆ ಸಂಪೂರ್ಣ ಮುದ್ದೆಯಾಗಿತ್ತು. ಅರ್ಥರ್ ಅವರಿಗೆ ಶೋಧ ಕಾರ್ಯ ಮುಂದುವರೆದಿದ್ದರೂ ಅವರು ಸಿಕ್ಕಿರಲಿಲ್ಲ.
ನಂತರ ಇಂದು ಅರ್ಥರ್ ಅವರು ಮಲ್ಪೆಯಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಘಟನೆ ಕುರಿತು ಮಾಹಿತಿ ನೀಡಿರುವ ಅರ್ಥರ್, ರಾತ್ರಿವರೆಗೆ ಬಲೆಯನ್ನು ಬಿಡಿಸುವ ಕಾಯಕದಲ್ಲಿ ತೊಡಗಿದ್ದೆವು. ಮಧ್ಯ ರಾತ್ರಿ ಸುಮಾರಿಗೆ ಗಾಳಿ ಮಳೆ ಹೆಚ್ಚಾಗಿ ಬೋಟ್ಗೆ ಕಟ್ಟಿದ್ದ ಪಾತಿ ಹಗ್ಗ ತುಂಡಾಗಿ ಸಮುದ್ರ ಪಾಲಾಯಿತು. ಬಲೆ ಎಳೆಯಲೆಂದು ಪಾತಿಯಲ್ಲಿ ಕುಳಿತಿದ್ದೆ. ಆದ್ದರಿಂದ ಆ ಸನ್ನಿವೇಶದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ನಂತರ ಸತತ 30 ಗಂಟೆಗಳವರೆಗೆ ಸಮುದ್ರದಲ್ಲಿ ಏಕಾಂಗಿ ಹೋರಾಟ ನಡೆಸಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಇದೀಗ ಮಲ್ಪೆಗೆ ಬಂದು ಸೇರಿರುವುದಾಗಿ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.