

ಬೆಂಗಳೂರು: ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2021ನಲ್ಲಿ ಇಂದು ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿ ಹಾರಾಟ ನಡೆಸಿದ್ದಾರೆ. ಎಲ್ಸಿಎ ತೇಜಸ್ ಯುದ್ಧ ವಿಮಾನದಲ್ಲಿ ಅವರು ಹಾರಾಟ ಮಾಡಿದ್ದಾರೆ.
ಎಲ್ಸಿಎ ತೇಜಸ್ ಲಘು ಯುದ್ಧ ವಿಮಾನದಲ್ಲಿ ಸುಮಾರು 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದರು. ಕೇಂದ್ರ ಸರ್ಕಾರ ಹೆಚ್ಎಎಲ್ನಿಂದ 48 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ತೇಜಸ್ ವಿಮಾನಗಳನ್ನು ಖರೀದಿಸಲು ನಿರ್ಧರಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ ತೇಜಸ್ವಿಯವರು, ಈ ಹಾರಾಟ ಅದ್ಭುತವಾದ ಅನುಭವ ನೀಡಿದೆ, ಇದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. 15 ಸಾವಿರ ಎತ್ತರದಲ್ಲಿ ಒಂದು ಸಾವಿರ ಕಿಲೋ ಮೀಟರ್ ವೇಗದಲ್ಲಿ ಹಾರಾಟ ಮಾಡಿರುವುದು ತುಂಬಾ ಖುಷಿ ತಂದಿದೆ ಎಂದರು.
ಕೆಲವು ವರ್ಷಗಳ ಹಿಂದೆ ಏರೋ ಇಂಡಿಯಾ ಷೋ ನೋಡಲು ಪಾಸ್ ಸಿಗುತ್ತಿರಲಿಲ್ಲ. ಆದರೆ ಇಂದು ಖುದ್ದಾಗಿ ಏರೋ ಇಂಡಿಯಾ ಷೋನ ವಿಮಾನದಲ್ಲಿ ಸುಮಾರು 30 ನಿಮಿಷ ಹಾರಾಟ ಮಾಡಿದ್ದು ತುಂಬಾ ಸಂತಸ ತಂದಿದೆ ಎಂದು ಅನುಭವ ಹಂಚಿಕೊಂಡರು.
ದೇಶೀಯವಾಗಿ ತಯಾರಾಗಿರುವ ತೇಜಸ್ ವಿಮಾನವನ್ನು ಖರೀದಿಸುವ ಮೂಲಕ ಬೆಂಗಳೂರು ನಗರವನ್ನು ವಿಶ್ವಮಟ್ಟದ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರದ ಅಗ್ರಗಣ್ಯ ನಗರವನ್ನಾಗಿ ಮಾರ್ಪಡಿಸಲು ಪಣತೊಟ್ಟಿರುವ ಸರ್ಕಾರದ ಕ್ರಮ ಸ್ವಾಗತಾರ್ಯ ಎಂದರು. ಎಲ್ಸಿಎ ಏರ್ಕ್ರಾಫ್ಟ್ ಭಾರತದವರೇ ನಿರ್ಮಾಣ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾಗೆ ಉತ್ತೇಜನ ಸಿಗಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 250ಕ್ಕೂ ಹೆಚ್ಚು ಕಂಪನಿಗಳು ಈ ಏರ್ ಕ್ರಾಫ್ಟ್ ಉತ್ಪಾದನೆಗೆ ಮುಂದಾಗಿವೆ. ಭಾರತೀಯ ನಿರ್ಮಾಣದ ಏರ್ ಕ್ರಾಫ್ಟ್ ಅದ್ಭುತವಾಗಿದೆ. ಲಘು ಯುದ್ಧ ವಿಮಾನ ನಿರ್ಮಾಣ ಮಾಡಿದ ಇಂಜಿನಿಯರ್, ಸಿಬ್ಬಂದಿಗಳಿಗೆ ಗೌರವ ಸಲ್ಲಿಸಬೇಕಾಗುತ್ತದೆ. ತೇಜಸ್ ಯುದ್ಧವಿಮಾನವನ್ನು ಹೆಚ್ಚು ರಫ್ತು ಮಾಡುವ ಮೂಲಕ ವಿಶ್ವ ದರ್ಜೆಯ ಬ್ರಾಂಡ್ ನ್ನಾಗಿಸಬೇಕೆಂದು ತೇಜಸ್ವಿ ಸೂರ್ಯ ನುಡಿದರು.