ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಗೆಲುವಿಗೆ ಪೂರಕ: ಎಸ್.ಟಿ. ಸೋಮಶೇಖರ್

S T Somashekar
Published on

ಬೆಂಗಳೂರು: ನಗರ ಮತ್ತು ಗ್ರಾಮೀಣ ಪ್ರದೇಶವನ್ನು ಒಳಗೊಂಡಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ರಸ್ತೆ, ಕುಡಿಯುವ ನೀರು ಸೇರಿ ಶೇ.75 ಅಭಿವೃದ್ಧಿ ಕಾಮಗಾರಿ ಮುಗಿದಿದೆ. ಉಳಿದ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಮುಕ್ತಾಯವಾಗಲಿದೆ ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಅಗರ, ಎಚ್. ಗೊಲ್ಲಹಳ್ಳಿ, ಕೆ.ಗೊಲ್ಲಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.

ಲೋಕೋಪಯೋಗಿ ರಸ್ತೆಗಳ ಅಭಿವೃದ್ಧಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳಚರಂಡಿಗಾಗಿ ಹಾಳಾದ ರಸ್ತೆಯನ್ನು 1,561 ಕೋಟಿ ರೂ. ಅನುದಾನದಲ್ಲಿ ಸರಿಪಡಿಸಲಾಗಿದೆ. 175 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 417 ಕೋಟಿ ರೂ. ವೆಚ್ಚದಲ್ಲಿ 223 ಗ್ರಾಮಗಳ ಸಂಪರ್ಕ ಕಲ್ಪಿಸಲು ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. 324 ಕೋಟಿ ರೂ. ಅನುದಾನದಲ್ಲಿ ಗ್ರಾಮೀಣ ಮನೆಗಳಿಗೆ ನಲ್ಲಿನೀರು ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ

ಬಿಬಿಎಂಪಿ ಪ್ರದೇಶದ 628 ಕಿ.ಮೀ. ಹೆಚ್.ಟಿ.ಲೈನ್ ಅನ್ನು ಭೂಗತ ಕೇಬಲ್ ಆಗಿ ಬದಲಾಯಿಸಲಾಗಿದೆ. ಕಂಬೀಪುರ ಮತ್ತು ದೊಡ್ಡೇರಿಯಲ್ಲಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ, ನೀರು, ವಿದ್ಯುತ್ ಸೌಕರ್ಯ ಕಲ್ಪಿಸುವುದರ ಜತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯಲ್ಲಿ ಕ್ರಮವಹಿಸಲಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆಂದು 1 ಬಿಎಚ್ ಕೆ, 2 ಬಿಎಚ್​ಕೆಯ 17,880 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 50ಕ್ಕೂ ಅಧಿಕ ಪಾರ್ಕ್​ಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net