

ಬೆಂಗಳೂರು: ಕರೊನಾ ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿದೆ. ಇದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇದೀಗ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಆಪ್ತ ಸಹಾಯಕರಾಗಿದ್ದ ಎಚ್.ಜೆ. ರಮೇಶ್ ಅವರನ್ನೂ ಕರೊನಾ ಬಲಿ ಪಡೆದಿದೆ.
ಈ ಕುರಿತು ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಕ್ಷೇತ್ರದ ಅನೇಕರನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಉಳಿಸಿದ್ದ ನನ್ನ ಆಪ್ತ ಸಹಾಯಕ ಎಚ್ಜೆ ರಮೇಶ್ ಇನ್ನಿಲ್ಲ. ರಮೇಶ್ ಸುಮಾರು ಎಂಟು ವರ್ಷ ನನ್ನೊಂದಿಗೆ ನಗುನಗುತ್ತಾ ಸೇವೆ ಸಲ್ಲಿಸಿದ್ದರು, ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಸುರೇಶ್ ಕುಮಾರ್ ಬರೆದುಕೊಂಡಿದ್ದಾರೆ.
ಕರೊನಾದಿಂದ ರಮೇಶ್ ಅವರು ಚೇತರಿಸಿಕೊಂಡಿದ್ದರು. ಆದರೆ ನಂತರ ಪುನಃ ಉಸಿರಾಟದ ಸಮಸ್ಯೆ ಉಂಟಾಗಿ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಇದ್ದಕ್ಕಿದ್ದಂತೆ ಅವರ ಆಮ್ಲಜನಕದ ಮಟ್ಟವು ಕಡಿಮೆಯಾಯಿತು ಮತ್ತು ಹೃದಯಾಘಾತದಿಂದ ಅವರು ಮೃತಪಟ್ಟರು ಎಂದು ಮೂಲಗಳು ಹೇಳಿವೆ.