ಸುಳ್ಯದಲ್ಲಿ ಶೂಟ್​ಔಟ್​: ಬಿಜೆಪಿ ಮುಖಂಡನ ಕೊಲೆ ಆರೋಪಿ ಗುಂಡಿಗೆ ಬಲಿ

shootout
Published on

ಮಂಗಳೂರು: ಕೊಡಗಿನ ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಎಂಬುವವರನ್ನು ಕಳೆದ ವರ್ಷ ಕೊಲೆ ಮಾಡಿರುವ ಆರೋಪ ಹೊತ್ತ ಸಂಪತ್​ಕುಮಾರ್​ (35) ಇಂದು ಸುಳ್ಯದಲ್ಲಿ ಗುಂಡಿಗೆ ಬಲಿಯಾಗಿದ್ದಾರೆ. ಇಂದು ನಸುಕಿನ ವೇಳೆ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಕೊಲೆ ಮಾಡಿದ್ದಾರೆ. ಸುಳ್ಯ ತಾಲೂಕಿನ ಶಾಂತಿನಗರದಲ್ಲಿ ಈ ಘಟನೆ ನಡೆದಿದೆ.

ಕಾರಿನಲ್ಲಿ ಬಂದ ನಾಲ್ವರ ತಂಡದಿಂದ ಗುಂಡಿನ ದಾಳಿ ನಡೆದಿದೆ. ಸಂಪತ್ ಬೆಳಗ್ಗೆ ಸುಮಾರು 6.30ರ ಹೊತ್ತಿಗೆ ಮನೆಯಿಂದ ಕಾರಿನಲ್ಲಿ ಹೊರಡುತ್ತಿದ್ದರು. ಈ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ. ಕಾರಿನ ಗಾಜಿಗೆ ಗುಂಡೇಟು ಬಿದ್ದ ಕೂಡಲೇ ಸಂಪತ್ ಕಾರಿನಿಂದ ಇಳಿದು ಪಕ್ಕದ ಇನ್ನೊಂದು ಮನೆಯತ್ತ ಓಡಿದ್ದಾರೆ‌. ಆದರೆ ದುಷ್ಕರ್ಮಿಗಳು ಅವರನ್ನು ಬೆನ್ನಟ್ಟಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗುಂಡೇಟು ತಗುಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಪತ್ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಸಂಪತ್ ಕುಮಾರ್ ಮೃತಪಟ್ಟಿದ್ದಾರೆ.

ಇದೊಂದು ಪೂರ್ವ ದ್ವೇಷದ ಕೃತ್ಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸುಳ್ಯ ಪೊಲೀಸರು, ಎಫ್‍ಎಸ್‍ಎಲ್ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net