ಪ್ರೀತಿಸಿದ ಮಹಿಳೆ ಜತೆ ಸೋಲೂರಿನ ಗದ್ದುಗೆ ಮಠದ ಸ್ವಾಮೀಜಿ ಎಸ್ಕೇಪ್​? ಪತ್ರದಲ್ಲಿದೆ ನೋವಿನ ನುಡಿ...

swamiji
Published on

ಮಾಗಡಿ: ಮಾಗಡಿಯ ಸೋಲೂರಿನ ಗದ್ದುಗೆ ಮಠದ ಶಿವಮಹಂತ ಸ್ವಾಮೀಜಿ ಅಲಿಯಾಸ್​ ಹರೀಶ್ ಸ್ವಾಮೀಜಿ ರಾತ್ರೋ ರಾತ್ರಿ ಮಠ ಬಿಟ್ಟು ಹೋಗಿದ್ದಾರೆ. ಪ್ರೀತಿಸಿದ ಮಹಿಳೆಯ ಜತೆಗೆ ಅವರು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಎರಡು ವರ್ಷದ ಹಿಂದೆ ಸ್ವಾಮೀಜಿ ಪಟ್ಟಾಭಿಷೇಕ ಸ್ವೀಕರಿಸಿದ್ದರು. ಮಠ ಬಿಟ್ಟು ಹೋಗುವ ಮುನ್ನ ಪತ್ರವೊಂದನ್ನು ಅವರು ಬರೆದಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಮಠ ಬಿಟ್ಟು ಸ್ವಾಮೀಜಿ ಹೋಗಿದ್ದು, ಇದೀಗ ಅದು ಬೆಳಕಿಗೆ ಬಂದಿದೆ.

ಪತ್ರದಲ್ಲಿ ಸ್ವಾಮೀಜಿ, 'ನಾನು ನನ್ನ ಸ್ವಾಮೀಜಿ ಜೀವನವನ್ನು ತ್ಯಜಿಸುತ್ತಿದ್ದೇನೆ. ಕಾರಣ ನನ್ನ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಈ ಕಾರಣದಿಂದ ನಾನು ಇದನ್ನೆಲ್ಲಾ ಬಿಟ್ಟು ದೂರ ಹೋಗುತ್ತಿದ್ದೇನೆ. ನನಗೆ ಈ ಜೀವನ ಜುಗುಪ್ಸೆಯನ್ನು ಉಂಟುಮಾಡಿದೆ. ಈ ಕಾರಣ ನಿಮಗೆಲ್ಲಾ ಗೊತ್ತಿದೆ ಎಂದು ಭಾವಿಸುತ್ತಿದ್ದೇನೆ. ದಯವಿಟ್ಟು ನನ್ನನ್ನು ಯಾರೂ ಹುಡುಕುವ ಪ್ಯತ್ನ ಮಾಡಬೇಡಿ, ಏಕೆಂದರೆ ನಾನು ಕಾವಿ ಬಟ್ಟೆಯನ್ನು ಬಿಚ್ಚಿದ ಮೇಲೆ ಮತ್ತೆ ಎಂದಿಗೂ ತೊಡುವುದಿಲ್ಲ. ಹಾಗೇನಾದರೂ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ನನ್ನ ಹೆಣವನ್ನು ನೀವು ನೋಡುತ್ತೀರಾ. ನಾನು ಕೇಳಿಕೊಳ್ಳುವುದು ಏನೆಂದರೆ ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ. ಎಲ್ಲೋ ಹೇಗೋ ನೆಮ್ಮದಿಯಾಗಿ ಇರುತ್ತೇನೆ. ಆದರೆ ನನ್ನನ್ನು ಮತ್ತೆ ಈ ಜೀವನಕ್ಕೆ ತರಬೇಡಿ. ತಂದಿದ್ದೇ ಆದರೆ ನನ್ನನ್ನ ಸಾವನ್ನ ನೋಡಬೇಕಾಗುತ್ತದೆ. ನನ್ನನ್ನು ಬದುಕಲು ಬಿಡಿ ಎಂದು ಅಂಗಲಾಚಿ ಕೇಳಿಕೊಳ್ಳುತ್ತೇನೆ. ದಯವಿಟ್ಟು ನನ್ನನ್ನು ಎಲ್ಲರೂ ಕ್ಷಮಿಸಿ, ನನ್ನನ್ನು ಎಲ್ಲರೂ ಮರೆತು ಬಿಡಿ ಎಂದು ಬರೆದಿದ್ದಾರೆ.

ಈ ಹಿಂದೆ ಕಂಬಾಳು ಮಠದಲ್ಲಿರುವಾಗ ಮೋಟಗೊಂಡನಹಳ್ಳಿ ಮಹಿಳೆಯೊಬ್ಬರ ಜತೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಸದ್ಯ ಅವರ ಜತೆಯೇ ಸ್ವಾಮೀಜಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಮಹಿಳೆಗೆ ಒಂದೂವರೆ ತಿಂಗಳ ಹಿಂದೆ ಮದುವೆ ಆಗಿತ್ತು. ಆದರೆ ಅವರ ಜತೆ ಸ್ವಾಮೀಜಿಗೆ ಪ್ರೇಮಾಂಕುರವಾಗಿರುವ ಹಿನ್ನೆಲೆಯಲ್ಲಿ ಅವರ ಜತೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಸ್ವಾಮೀಜಿ ನಾಪತ್ತೆಯಾಗಿರುವ ಬಗ್ಗೆ ಇದುವರೆಗೂ ದೂರು ದಾಖಲಾಗಿಲ್ಲ. ಆದರೆ ಗೃಹಣಿ ನಾಪತ್ತೆ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವಾಮೀಜಿ ವೀರಾಪುರ ಗ್ರಾಮದವರಾಗಿದ್ದಾರೆ. ಶ್ರೀಗಳನ್ನು ಕರೆತಂದು ಮನವೊಲಿಸುವ ಯತ್ನದಲ್ಲಿ ಇದಾಗಲೇ ಹಲವಾರು ಮಠಾಧ್ಯಕ್ಷರು ತೊಡಗಿದ್ದಾರೆ. ಆದರೆ ಅವರು ಎಲ್ಲಿದ್ದಾರೆಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಈ ಘಟನೆಯಿಂದ ಹಿರಿಯ ಶ್ರೀ ಮಹಂತಸ್ವಾಮೀಜಿ ಸೇರಿದಂತೆ ಹರಗುರ, ಚರಮೂರ್ತಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಪ್ರತಿಷ್ಠಿತ ಮಠದ ಕಿರಿಯ ಶ್ರೀಗಳ ನಡೆ ವಿರುದ್ಧ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ‌.

ಅಂದಹಾಗೆ ಈ ಸ್ವಾಮೀಜಿ ಇಂಜಿನಿಯರ್​ ಆಗುವ ಬಗ್ಗೆ ಜೀವನದಲ್ಲಿ ಸಾಕಷ್ಟು ಕನಸು ಹೊಂದಿದ್ದರು ಎನ್ನಲಾಗಿದೆ. ಶ್ರೀಮಠದ ಕಾಲೇಜಿನಲ್ಲಿ ಬಿ.ಎ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net