ನಸುಕಿನಲ್ಲಿ ಭೀಕರ ಕಾರು ಅಪಘಾತ: ಮಾಜಿ ಸಚಿವ ವಿನಾಯಕ್​ ಮೇಟೆ ನಿಧನ- ಭದ್ರತಾ ಸಿಬ್ಬಂದಿಗೆ ಗಾಯ

accident
Published on

ಮುಂಬೈ: ಮುಂಬೈ-ಪುಣೆ ಎಕ್ಸ್‌ಪ್ರೆಸ್‍ವೇಯಲ್ಲಿ ಇಂದು ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಶಿವಸಂಗ್ರಾಮ್ ಮುಖ್ಯಸ್ಥ ಹಾಗೂ ಮಾಜಿ ಸಚಿವ ವಿನಾಯಕ್ ಮೇಟೆ ಮೃತಪಟ್ಟಿದ್ದಾರೆ.

ಮುಂಜಾನೆ 5.30ರ ಸುಮಾರಿಗೆ ಪನ್ವೇಲ್ ಬಳಿಯ ಮಂದಪ್ ಸುರಂಗದ ಬಳಿ ಮೇಟೆ ಅವರ ಎಸ್‍ಯುವಿ ಕಾರು ಅಪಘಾತಕ್ಕೀಡಾಗಿದ್ದು, ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಮರಾಠಾ ಮೀಸಲಾತಿ ಕುರಿತು ಚರ್ಚೆಗಾಗಿ ಇವರು ಮುಂಬೈಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತವಾಗಿದೆ. ಅಪಘಾತದಲ್ಲಿ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.

ವಿನಾಯಕ್ ಮೇಟೆ ಅವರ ತಲೆ, ಕುತ್ತಿಗೆ, ಕೈಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿತ್ತು. ಕೂಡಲೇ ಅವರನ್ನು ಎಂಜಿಎಂ (ಮಹಾತ್ಮ ಗಾಂಧಿ ಮಿಷನ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ.

ಅರಬ್ಬಿ ಸಮುದ್ರದಲ್ಲಿ ಪೌರಾಣಿಕ ಮರಾಠ ಯೋಧ ಛತ್ರಪತಿ ಶಿವಾಜಿ ಮಹಾರಾಜರ ಗೌರವಾರ್ಥ ಭವ್ಯ ಸ್ಮಾರಕವನ್ನು ನಿರ್ಮಿಸುವ ಯೋಜನೆಯ ಮೇಲ್ವಿಚಾರಣೆಯ ಸಮಿತಿಯ ಮುಖ್ಯಸ್ಥರಾಗಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಪನ್ವೇಲ್‌ನ ಎಂಜಿಎಂ ಆಸ್ಪತ್ರೆಗೆ ಆಗಮಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net