ಬಿಜೆಪಿ ನಾಯಕಿ ನೂಪುರ್​ ಶರ್ಮಾ ಹತ್ಯೆಗೆ ನಿಯೋಜನೆಗೊಂಡಿದ್ದ ಉಗ್ರ ಅರೆಸ್ಟ್​: ಈತನದ್ದು ಭಯಾನಕ ಹಿಸ್ಟರಿ...

nupur
Published on

ನವದೆಹಲಿ: ಹಿಂದೂ ದೇವತೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಸಿಡಿದೆದ್ದು ಪ್ರವಾದಿ ಮೊಹಮ್ಮದ್​ ಕುರಿತು ಮಾತನಾಡಿದ ಕಾರಣಕ್ಕೆ ಭಾರಿ ವಿವಾದದಲ್ಲಿ ಸಿಲುಕಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡಲು ನಿಯೋಜನೆಗೊಂಡಿದ್ದ ಉಗ್ರ ಸೆರೆ ಸಿಕ್ಕಿದ್ದಾನೆ.

ನೂಪುರ್​ ಶರ್ಮಾ ಅವರನ್ನು ಹತ್ಯೆ ಮಾಡಲು ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ನಿಯೋಜಿಸಿದ್ದ ಉಗ್ರ ಸಹರಾನ್‌ಪುರದ ಗಂಗೋಹ್ ಗ್ರಾಮದ ಮೊಹಮ್ಮದ್ ನದೀಮ್​ನನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಈತನನ್ನು ಬಂಧಿಸಲಾಗಿದೆ.

ಪಾಕಿಸ್ತಾನ ಮೂಲದ ಜೆಎಂಇ ಹಾಗೂ ಟಿಟಿಪಿ ಭಯೋತ್ಪಾದನಾ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಮೊಹಮ್ಮದ್ ನದೀಮ್, ನೂಪುರ್ ಶರ್ಮಾರನ್ನು ಕೊಲ್ಲುವ ಕೆಲಸ ವಹಿಸಿಕೊಂಡಿದ್ದ. ಈತ ಶಸ್ತ್ರಾಸ್ತ್ರ ತರಬೇತಿಗಾಗಿ ಪಾಕಿಸ್ತಾನಕ್ಕೆ ತೆರಳಲು ಸಿದ್ಧನಾಗಿದ್ದ. ಆತ ತನ್ನ ಫೋನ್ ದಾಖಲೆಗಳು ಮತ್ತು ಸಂದೇಶಗಳನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಧಾರಿತ ಸ್ಫೋಟಕ ಸಾಧನ ಅಥವಾ ಐಇಡಿ ಅನ್ನು ಹೇಗೆ ನಿರ್ಮಿಸುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈತನ ಫೋನ್​ನಿಂದ ವಶಪಡಿಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ, ಜೈಷ್ ಮತ್ತು ಥರೀಕ್-ಎ-ತಾಲಿಬಾನ್ ಜತೆಗಿನ ಚಾಟ್ ಮತ್ತು ಧ್ವನಿ ಸಂದೇಶಗಳನ್ನು ಮೊಹಮ್ಮದ್ ನದೀಮ್ ಫೋನ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಎಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net