‘ನೀವೇ ಸಿಎಂ ಎಂದು ಗುಣಗಾನ ಮಾಡ್ತಿರೋರೇ ಸೂಟ್‌ ಹೊಲಿಸಿ ಮುಹೂರ್ತ ಇಟ್ಕೊಂಡಿರೋದು ನಂಗೊತ್ತಿಲ್ವಾ?’

DKshi
Published on

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ತಾವು ರಾಜೀನಾಮೆ ಕೊಡಲು ಸಿದ್ಧ ಎಂದು ಬಿ.ಎಸ್‌.ಯಡಿಯೂರಪ್ಪನವರು ಹೇಳುತ್ತಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಯಡಿಯೂರಪ್ಪನವರ ನಾಯಕತ್ವದ ಕುರಿತು ಇದಾಗಲೇ ರಾಜಕೀಯ ಮುಖಂಡರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇದರ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಹೊಸದೊಂದು ಬಾಂಬ್‌ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹೇಳುವುದೊಂದು ಇದ್ದರೆ, ಮಾಡುವುದು ಮತ್ತೊಂದು ರಾಜಕಾರಣದಲ್ಲಿ ಹೊಸತೇನಲ್ಲ. ನಾನಾ ತಂತ್ರಗಾರಿಕೆ ಇದರಲ್ಲಿ ಇರೋದು ಎಲ್ಲರಿಗೂ ಗೊತ್ತಿದ್ದದ್ದೇ. ಅದೇ ರೀತಿ ಯಡಿಯೂರಪ್ಪನವರ ರಾಜೀನಾಮೆ ಹೇಳಿಕೆ ಕೂಡ ಎಂದು ಹೇಳಿದರು.

ಈ ಹೇಳಿಕೆಯ ಹಿಂದೆ ಏನೇನೋ ತಂತ್ರಗಳು ಇವೆ. ಬಿಜೆಪಿ ಮಾತ್ರವಲ್ಲದೇ ರಾಜ್ಯದಲ್ಲಿಯೂ ಯಡಿಯೂರಪ್ಪನವರು ಗಟ್ಟಿ ನಾಯಕ ಎಂದೇ ಗುರುತಿಸಿಕೊಂಡವರು. ಅವರ ರಾಜೀನಾಮೆಯ ಹೇಳಿಕೆಯನ್ನು ಅನೇಕ ವಿಧದಲ್ಲಿ ವಿಶ್ಲೇಷಣೆ ಮಾಡಬಹುದು. ನನ್ನನ್ನು ಮುಟ್ಟಿ ನೋಡಿ ಅಂತಾ ಎಚ್ಚರಿಕೆ ಇದ್ದರೂ ಇರಬಹುದು, ಇಲ್ಲವೇ ನಾನು ಶಿಸ್ತಿನ ಸಿಪಾಯಿ ಅಂತಾನೂ ಇರಬಹುದು. ನೋಡೋಣ ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು. ಅವರ ನಾಯಕತ್ವವನ್ನು ಬದಲಿಸುವ ನಿರ್ಧಾರಕ್ಕೂ ತಮಗೂ ಸಂಬಂಧವಿಲ್ಲ. ಆದರೆ ಒಂದಂತೂ ಸ್ಪಷ್ಟ. ಯಡಿಯೂರಪ್ಪ ಗಟ್ಟಿ ಮನುಷ್ಯ, ಅಷ್ಟು ಸಲೀಸಾಗಿ ಅವರು ಜಗ್ಗಲ್ಲ ಎಂದೂ ಹೇಳಿದರು.

ಅದೇ ವೇಳೆ ಬಾಂಬ್ ಒಂದನ್ನು ಎಸೆದ ಶಿವಕುಮಾರ್‌, ನೋಡಿ ಇದಾಗಲೇ ಏಳೆಂಟು ಮಂದಿ ಈ ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ತಾವೇ ಮುಖ್ಯಮಂತ್ರಿ ಆಗಲು ಸಿದ್ಧರಾಗಿದ್ದಾರೆ. ಎದುರುಗಡೆಯಿಂದ ನೀವೇ ನಮ್ಮ ಸಿಎಂ ಎಂದು ಯಡಿಯೂರಪ್ಪನವರಿಗೇ ಹೇಳುತ್ತಿರುವವರೇ ಮನೆಯಲ್ಲಿ ತಾವೇ ಸೂಟ್ ಹೊಲಿಸಿ, ಮುಹೂರ್ತ ಇಟ್ಟುಕೊಂಡು ರೆಡಿಯಾಗಿದ್ದಾರೆ. ಇವೆಲ್ಲವೂ ನನಗೆ ಗೊತ್ತಿರುವಂಥದ್ದೇ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net