ಶುರುವಾಯ್ತು ಒಬ್ಳೇ ಹೆಂಡ್ತಿ ಚಾಲೆಂಜ್​! ಸತ್ಯಹರಿಶ್ಚಂದ್ರ ಯಾರಪ್ಪಾ ಎಂದು ಸವಾಲ್​ ಹಾಕಿದ ಸಚಿವ..

sudhakra1
Published on

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳೆ ಸಿಡಿ ಕೇಸ್​ ಕ್ಷಣ ಕ್ಷಣಕ್ಕೂ ಹೊಸ ಹೊಸ ವಿವಾದಗಳನ್ನು ಸೃಷ್ಟಿ ಮಾಡುತ್ತಲೇ ಸಾಗಿದೆ. ಈ ವಿಚಾರದ ಕುರಿತಂತೆ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ವಾಕ್ಸಮರ ಮುಂದುವರೆದಿದೆ.

ಬಿಜೆಪಿ ಸಚಿವರಾಗಿದ್ದವರ ವಿರುದ್ಧ ಸಿಡಿ ಕೇಸ್​ ಬಂದಿದ್ದರಿಂದ ಕಾಂಗ್ರೆಸ್​ನವರು ಎಲ್ಲಾ ಬಿಜೆಪಿ ಮುಖಂಡರ ವಿರುದ್ಧ ಟೀಕೆ ಮಾಡುತ್ತಿದ್ದರೆ ಇದೀಗ ಆರೋಗ್ಯ ಸಚಿವ ಡಾ. ಕೆ.ಸುಧಾಕರ್​ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ?" ಎಂದು ಸುಧಾಕರ್​ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನೂ ಸೇರಿದಂತೆ 224 ಶಾಸಕರ ಮೇಲೆಯೂ ತನಿಖೆಯಾಗಲಿ. ಎಲ್ಲರನ್ನೂ ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತೆ ಎಂದು ತಿಳಿಸಿದರು.

ಈ ವಿಷಯವನ್ನು ಸದನಲ್ಲಿ ಕೂಡ ಹೇಳಬೇಕು ಅಂದುಕೊಂಡಿದ್ದೆ.. ಮರ್ಯಾದಾ ಪುರುಷರು, ಸತ್ಯಹರಿಶ್ಚಂದ್ರರು ಯಾರ್ಯಾರು ಇದ್ದಾರೆ ಗೊತ್ತಾಗಿಹೋಗಲಿ, ತಾವು ಶ್ರೀರಾಮಚಂದ್ರರು ಎಂದು ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಮಾತನಾಡುತ್ತಿದ್ದಾರಲ್ಲ. ಅವರಿಗೆ ಒಂದು ಸವಾಲ್ ಹಾಕುತ್ತೇನೆ. 225 ಜನ ಕೂಡ ತನಿಖೆಗೆ ಒಳಪಡಲಿ. ನಿಮ್ಮ ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂಬುದು ಸಾಬೀತಾಗಿ ಹೋಗಲಿ ಎಂದರು.

ಈ ಸವಾಲು ಇದೀಗ ಎಲ್ಲ ಪಕ್ಷದಲ್ಲಿಯೂ ಭಾರಿ ಕೋಲಾಹಲ ಸೃಷ್ಟಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net