ಸಿದ್ದರಾಮಯ್ಯ ಊಸರವಳ್ಳಿ, ಎಡಬಿಡಂಗಿ- ಸಿದ್ದುಗೆ ಎಚ್​ಡಿಕೆ ಗುದ್ದು!

HDK1
Published on

ಬೆಂಗಳೂರು: ಜೆಡಿಎಸ್ ಸ್ವಾರ್ಥಿಗಳಿಂದ ಕೂಡಿರುವ ಅವಕಾಶವಾದಿ ಪಕ್ಷ. ದೇವೇಗೌಡ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಹೋದವರು ಎಂದು ವಿರೋಧ ನಾಯಕ ಸಿದ್ದರಾಮಯ್ಯ ಹೇಳಿದ ಹೇಳಿಕೆಗೆ ಕಿಡಿ ಕಾರಿರುವ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಊಸರವಳ್ಳಿ, ಎಡಬಿಡಂಗಿ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಎಂ.ಎಲ್.ಸಿ. ಜೆ.ಡಿ.ಎಸ್. ವಕ್ತಾರ ರಮೇಶ್ ಬಾಬು ಅವರನ್ನು ಪಕ್ಷಕ್ಕೆ ಸೇರ್ಪಡೆಮಾಡಿಕೊಂಡು ಮಾತನಾಡಿದ್ದ ಸಂದರ್ಭದಲ್ಲಿ ನಿನ್ನೆ ಸಿದ್ದರಾಮಯ್ಯನವರು ಜೆಡಿಎಸ್​ ಪಕ್ಷದ ಕುರಿತಾಗಿ ಮಾತನಾಡಿದ್ದರು.

ಇದರಿಂದ ಕೆಂಡಾಮಂಡಲವಾಗಿರುವ ಕುಮಾರಸ್ವಾಮಿಯವರು ಸರಣಿ ಟ್ವೀಟ್​ ಮೂಲಕ ಸಿದ್ದರಾಮಯ್ಯನವರನ್ನು ವಾಚಾಮಗೋಚರವಾಗಿ ಬೈದಿದ್ದಾರೆ. ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್​ಗೆ ಜಿಗಿದ ಸಿದ್ದರಾಮಯ್ಯನವರು ಜೆಡಿಎಸ್ ಬಗ್ಗೆ ಮಾತನಾಡಿ ತಮ್ಮ ಊಸರವಳ್ಳಿ ರಾಜಕಾರಣದ ನಿಜಬಣ್ಣ ಬಯಲು ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿದ್ದಾಗ ಅಧಿಕಾರ, ಸ್ಥಾನ-ಮಾನಗಳನ್ನು ಅನುಭವಿಸಿ ತಮ್ಮ ಬೆಂಬಲಿಗರೊಂದಿಗೆ ಗಂಟು ಮೂಟೆ ಕಟ್ಟಿಕೊಂಡು ಅಧಿಕಾರದ ಆಸೆಗಾಗಿ, ಅವಕಾಶವಾದಿ ಹಾದಿ ಹಿಡಿದ ಕೃತಘ್ನಗೇಡಿತನದ ಸಿದ್ದರಾಮಯ್ಯ ಅವರಿಂದ ನಮ್ಮ ಪಕ್ಷ ಸ್ವಾಭಿಮಾನದ ಪಾಠ ಕಲಿಯಬೇಕಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದಾಗಲೇ ಬಹಿರಂಗವಾಗಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಬೇಕು. ಇದನ್ನು ಬುಡಸಹಿತ ಕಿತ್ತೊಗೆಯಬೇಕು ಎಂದು ಬಹಿರಂಗವಾಗಿ ಅಂತರಂಗದ ಮಾತನ್ನು ಉದ್ಗರಿಸಿದ್ದ ನೀವು ಎಂತಹ ಸ್ವಾರ್ಥಿ ಮತ್ತು ಎಡಬಿಡಂಗಿತನದ ರಾಜಕಾರಣಿ ಎಂಬುದು ಇಡೀ ನಾಡಿಗೆ ಗೊತ್ತಿದೆ ಎಂದು ಕಿಡಿ ಕಾರಿದ್ದಾರೆ.

ಅಧಿಕಾರದ ನಿರ್ಮೋಹ, ಸ್ವಾಭಿಮಾನಕ್ಕೆ ಕಟ್ಟುಬಿದ್ದು ದೇವೇಗೌಡರು ಪ್ರಧಾನಿ ಹುದ್ದೆಯನ್ನೇ ತ್ಯಜಿಸಿ ಬಂದರು. ಅಧಿಕಾರ ಉಳಿಸಿಕೊಳ್ಳಬೇಕೆಂದಿದ್ದರೆ ಪ್ರಧಾನಿಯಾಗಿ ಮುಂದುವರಿಯಬಹುದಿತ್ತು. ದೇವೇಗೌಡರ ಈ ಸ್ವಾಭಿಮಾನಿ ರಾಜಕಾರಣವನ್ನು ಇಷ್ಟು ಬೇಗ ಮರೆತು ಬಿಟ್ಟಿರಾ? ಆತ್ಮವಂಚನೆಯ ರಾಜಕಾರಣಿಯಿಂದ ಜೆಡಿಎಸ್ ಕಲಿಯುವುದು ಏನೇನೂ ಇಲ್ಲ. ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನರ ಕಷ್ಟಕಾರ್ಪಣ್ಯಗಳು, ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದೆ. ಅಧಿಕಾರದ ಮದ ಮತ್ತು ದುರಹಂಕಾರವನ್ನು ಎಂದೂ ಪ್ರದರ್ಶನ ಮಾಡಿಲ್ಲ. ಅಧಿಕಾರದ ಅಲ್ಪಾವಧಿಯಲ್ಲೂ ಜನಕಲ್ಯಾಣ ಪಕ್ಷದ ಹೆಗ್ಗುರುತಾಗಿತ್ತು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net