ಭಾರಿ ಮಳೆ ಹಿನ್ನೆಲೆ: ಕೆಲವೆಡೆ ನಾಳೆಯ ಪದವಿ, ಪಿಜಿ ಪರೀಕ್ಷೆ ಮುಂದೂಡಿಕೆ

exam
Published on

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ (ಸೋಮವಾರ) ನಡೆಯಬೇಕಿರುವ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯವು ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ.

ಸೋಮವಾರ ನಿಗದಿಯಾಗಿದ್ದ ಪರೀಕ್ಷೆಗಳು ಮಾತ್ರ ಮುಂದೂಡಿಕೆಯಾಗಿದ್ದು, ಬೇರೆ ಎಲ್ಲಾ ಪರೀಕ್ಷೆಗಳು ಮಾಮೂಲಿನಂತೆಯೇ ನಡೆಯಲಿವೆ. ಇದು ಸದ್ಯ ಕೇವಲ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡುಗುಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲಿ ನಿಗದಿಪಡಿಸಲಾಗುವುದು. ಉಳಿದಂತೆ ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮಂಗಳವಾರ ಸೆಪ್ಟೆಂಬರ್ 22 ರಂದು ನಡೆಯಲಿರುವ ಪರೀಕ್ಷೆಗಳ ಬಗ್ಗೆ ನಾಳೆ ನಿರ್ಧಾರ ಪ್ರಕಟವಾಗಲಿದೆ.

ಎರಡು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ಥವಾಗಿದೆ. ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು ಹಲವಾರು ಪ್ರದೇಶಗಳಲ್ಲಿ ನೀರು ಹರಿಯುತ್ತಿದೆ. ಹಲವು ರಸ್ತೆಗಳು ನೀರಿನಿಂದ ಮುಳುಗಡೆಯಾಗಿದ್ದು, ಸಂಪರ್ಕ ಕಳೆದುಕೊಂಡಿದೆ. ಈ ಕಾರಣದಿಂದಾಗಿ, ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗುವುದು ಅಸಾಧ್ಯವಾದ ಕಾರಣ ಪರೀಕ್ಷೆ ಮುಂದೂಡಿಕೆಯಾಗಿದೆ. ಪರೀಕ್ಷೆಗಳಿಗೆ ಹೊಸ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಪರೀಕ್ಷೆ) ಡಾ. ಪಿ.ಎಲ್. ಧರ್ಮ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net