

ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷನ ಕೊಲೆಯ ನಂತರ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇದೀಗ ವಾತಾವರಣ ಸ್ವಲ್ಪ ತಿಳಿಯಾದ ಹಿನ್ನೆಲೆಯಲ್ಲಿ 11 ದಿನಗಳ ಬಳಿಕ ಇಂದು ಪುನಃ ಶಾಲಾ-ಕಾಲೇಜು ತೆರೆಯಲಾಗಿದೆ.
ಇಷ್ಟು ದಿನಗಳಿಂದ ಶಾಲಾ-ಕಾಲೇಜು ಇಲ್ಲದೇ ಕಸಿವಿಸಿಗೊಂಡಿದ್ದ ಹಲವು ವಿದ್ಯಾರ್ಥಿಗಳು ಪುನಃ ಶಾಲಾ-ಕಾಲೇಜುಗಳತ್ತ ಖುಷಿಯಿಂದ ಬರುತ್ತಿದ್ದರೆ, ಅದೇ ಇನ್ನೊಂದೆಡೆ ಇಷ್ಟು ದಿನ ತಣ್ಣಗಿದ್ದ ಹಿಜಾಬ್ ಸಂಘರ್ಷವನ್ನು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮುಂದುವರೆಸಿದ್ದಾರೆ.
ತರಗತಿ ಒಳಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಅಂತ ಆಗ್ರಹಿಸಿ ಶಿವಮೊಗ್ಗ ನಗರದ ಡಿವಿಎಸ್ ಕಾಲೇಜು ಎದುರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಸಾಲದು ಎಂಬುದಕ್ಕೆ ಕಾಲೇಜಿನಿಂದ ಹಿಂದಿನ ಮಾದರಿಯಲ್ಲಿಯೇ ಮತ್ತೆ ಕಾಲೇಜಿಗೆ ಹೋಗದೆ ಮನೆಗೆ ವಾಪಸ್ ಆಗಿದ್ದಾರೆ.
ಡಿವಿಎಸ್ ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಿಜಾಬ್‌ಗೆ ಅವಕಾಶ ನೀಡಲಿಲ್ಲ. ಆದರೆ ಇದನ್ನು ಕೇಳದ ವಿದ್ಯಾರ್ಥಿನಿಯರು ಕ್ಲಾಸ್‌ನಿಂದ ಹೊರಗೆ ಬಂದಿದ್ದಾರೆ. ಇಂದು ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿತ್ತು. ಅದನ್ನು ಧಿಕ್ಕರಿಸಿ ಈ ವಿದ್ಯಾರ್ಥಿನಿಯರು ವಾಪಸಾಗಿದ್ದಾರೆ.
ಮಾರ್ಚ್ 4ರವರೆಗೆ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಬೆಳಗ್ಗೆ 6 ರಿಂದ ಸಂಜೆ 7ರ ವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಸಂಜೆ 7 ರಿಂದ ಬೆಳಗ್ಗೆ 6 ಗಂಟೆವರೆಗೆ ತುರ್ತು ಸೇವೆಗಷ್ಟೇ ಅನುಮತಿ ನೀಡಿ ಆದೇಶ ನೀಡಲಾಗಿದೆ.