

ಮಂಗಳೂರು: ರಾಜ್ಯಕ್ಕೆ ಪುನಃ ಉಗ್ರರ ಭೀತಿ ಆವರಿಸಿದೆ. ಸ್ವಲ್ಪ ಸಮಯದ ಹಿಂದೆ ಭಾರಿ ಸುದ್ದಿ ಮಾಡಿದ್ದ ಸ್ಯಾಟಲೈಟ್ ಫೋನ್ ಮತ್ತೆ ಸಕ್ರಿಯವಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಸ್ಯಾಟಲೈಟ್ ಫೋನ್ ಅನ್ನು ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ಟ್ರೇಸ್ ಮಾಡಿದ್ದು, ಈ ಫೋನ್ ಮೂಲಕ ನಿಗೂಢ ವ್ಯಕ್ತಿಗಳ ಸಂಪರ್ಕ ಮಾಡಿರುವುದು ತಿಳಿದುಬಂದಿದೆ.
ಮಲೆನಾಡು ಮತ್ತು ಕರಾವಳಿಯ ದಟ್ಟಾರಣ್ಯ ಭಾಗದಲ್ಲಿ ಸ್ಯಾಟಲೈಟ್ ಫೋನ್ ಸಂಪರ್ಕ ಹೆಚ್ಚಾಗಿದ್ದು, ಈ ಕುರಿತು ರಾಜ್ಯ ಗುಪ್ತಚರ ಇಲಾಖೆಗೆ ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ. ಕಳೆದ ಒಂದು ವಾರದಿಂದ ರಾಜ್ಯದ 4 ಕಡೆ ಸ್ಯಾಟಲೈಟ್ ಪೋನ್ ಸಂಪರ್ಕ ಮಾಡಿರುವುದು ತಿಳಿದುಬಂದಿದೆ.
ಉಡುಪಿ, ಬೆಳ್ತಂಗಡಿ ಮತ್ತು ಚಿಕ್ಕಮಗಳೂರು ದಟ್ಟಾರಣ್ಯ ಪ್ರದೇಶದಲ್ಲಿ ಸಂಪರ್ಕ ಸಾಧಿಸಲಾಗಿದ್ದು, ಈ ಕುರಿತು ರಾಜ್ಯ ಗುಪ್ತಚರ ಇಲಾಖೆ ಮತ್ತು ಎಎಸ್ ಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಅಷ್ಟಕ್ಕೂ ಸ್ಯಾಟಲೈಟ್ ಕರೆ ಎಂದರೇನು? ನಾವ್ಯಾಕೆ ಭಯಪಡಬೇಕು?
ಸ್ಥಳೀಯ ದೂರ ಸಂಪರ್ಕ ಕಂಪನಿಗಳ ಸಂಪರ್ಕ ಜಾಲದ ಸಹಕಾರವಿಲ್ಲದೆ ನೇರವಾಗಿ ಉಪಗ್ರಹ ಸಹಾಯದಿಂದ ಕರೆ ಮಾಡಬಹುದಾದ ಸಾಧನವೇ ಸ್ಯಾಟಲೈಟ್ ಫೋನ್. ಇದನ್ನು ಸಾಮಾನ್ಯ ಜನರು ಬಳಸುವುದಿಲ್ಲ ಬದಲಿಗೆ, ಸಮುದ್ರ ಯಾನದ ಸಂದರ್ಭ ಹಡಗುಗಳಲ್ಲಿ ತುರಾಯ ಸ್ಯಾಟಲೈಟ್ ಫೋನ್‌ಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ. ಇದರಿಂದ ಮಾಡುವ ಕರೆ ಹೆಚ್ಚು ವೆಚ್ಚದಾಯಕವಾಗಿದೆ.
ತುರಾಯಾ, ಇರೀಡಿಯಂ ಮುಂತಾದ ಕಂಪನಿಗಳ ಸ್ಯಾಟಲೈಟ್ ಫೋನ್ ಬಳಕೆ ಈ ಹಿಂದೆ ದೇಶದಲ್ಲಿತ್ತು. 2008ರ ಮುಂಬೈ ದಾಳಿಯ ನಂತರ ತುರಾಯಾ ಕಂಪೆನಿಯ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಸಂಬಂಧ ಡಿಜಿ ಶಿಪ್ಪಿಂಗ್ ಕೂಡ ವಿಶೇಷ ಆದೇಶ ಹೊರಡಿಸಿದೆ. ಉಗ್ರಗಾಮಿಗಳು, ಭೂಗತ ಪಾತಕಿಗಳು ಸ್ಥಳೀಯ ಭದ್ರತಾ ವ್ಯವಸ್ಥೆಯ ಕಣ್ಣು ತಪ್ಪಿಸಿ ಇದನ್ನು ಬಳಸುತ್ತವೆ ಎಂಬ ಅನುಮಾನದಿಂದ ಈ ಕರೆಯ ಬಗ್ಗೆ ದೇಶದ ಎಲ್ಲ ಭದ್ರತಾ ವಿಭಾಗಗಳು ವಿಶೇಷ ಗಮನ ನೀಡುತ್ತವೆ.
2019ರಲ್ಲಿ ಆಗಸ್ಟ್‌ನಲ್ಲಿ ನಿಗೂಢ ವ್ಯಕ್ತಿಗಳು ಸ್ಯಾಟಲೈಟ್ ಕರೆಗಳನ್ನು ಸ್ವೀಕರಿಸಿದ ಬಗ್ಗೆ ಬೆಳ್ತಂಗಡಿಯಿಂದ ವರದಿಯಾಗಿತ್ತು. ಆಂತರಿಕ ಭದ್ರತಾ ಪಡೆ ಅಧಿಕಾರಿಗಳು ನಿಡ್ಲೆ, ಗೋವಿಂದೂರಿನಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಡಳಿತ ಯಂತ್ರ ಕರೊನಾ ನಿಯಂತ್ರಣಕ್ಕೆ ಗಮನ ಕೊಡುತ್ತಿರುವ ವೇಳೆಯಲ್ಲೇ ಈ ರೀತಿ ಅಸಹಜ ರೀತಿಯಲ್ಲಿ ಸ್ಯಾಟಲೈಟ್ ಕರೆಗಳು ಬಂದಿರುವುದು ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಆಗಿದ್ದವು.
ಕಳೆದ ಜುಲೈನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಬಳಿ ಅರಣ್ಯ ಪ್ರದೇಶ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳದ ಬಜಗೋಳಿಯಲ್ಲಿ ಕರೆ ಲೊಕೇಶನ್ ಪತ್ತೆಯಾಗಿದ್ದವು. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಹಿರೇಗುತ್ತಿ ಕುಮಟಾ, ಭಟ್ಕಳದಲ್ಲೂ ಕರೆಗಳು ಬಂದಿರುವುದು ತಿಳಿದಿತ್ತು. ಆ ಬಳಿಕ ರಾಜ್ಯ ಗುಪ್ತಚರ ಇಲಾಖೆ ನಡೆಸಿದ ತನಿಖೆಯಿಂದ ಕೇರಳ ಗಡಿಭಾಗದ ಗುಡ್ಡ ಪ್ರದೇಶ, ಜಿಲ್ಲೆಯ ದಿಡುಪೆ, ಗೇರುಕಟ್ಟೆ, ಸುಳ್ಯದ ಅರಣ್ಯ ಪ್ರದೇಶಗಳಿಂದ ಸ್ಯಾಟ್‌ಲೈಟ್ ಫೋನ್ ಆ್ಯಕ್ಟಿವ್ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದವು.
ಕಾರವಾರದ ಬಂದರು ಸಮೀಪ ಎರಡು ಮೂರು ಬಾರಿ ಸ್ಯಾಟಲೈಟ್ ಕರೆಯ ಸುಳಿವು ಸಿಕ್ಕಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಇದುವರೆಗೂ ಯಾವುದೇ ಶಂಕಿತರೂ ಪತ್ತೆಯಾಗಿಲ್ಲ. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಕಾರವಾರ ಅತೀ ಮುಖ್ಯ ಪ್ರದೇಶವಾಗಿದೆ. ಕಾರವಾರದಲ್ಲಿ ರಾಷ್ಟ್ರೀಯ ಭದ್ರತಾ ದಳ, ಕೇಂದ್ರ ಇಂಟಲಿಜನ್ಸಿಗಳು ಸ್ಯಾಟಲೈಟ್ ಮೂಲಕವೂ ಇಲ್ಲಿನ ಆಗುಹೊಗುಗಳ ಬಗ್ಗೆ ಹದ್ದಿನ ಕಣ್ಣಿಟ್ಟಿರುತ್ತವೆ. ಕಾರವಾರದ ನೌಕಾನೆಲೆ ಉಗ್ರಗಾಮಿಗಳ, ವಿರೋಧಿ ರಾಷ್ಟ್ರಗಳ ಮುಖ್ಯ ಟಾರ್ಗೆಟ್ ಸಹ ಆಗಿದ್ದು, ಇಲ್ಲಿನ ರಹಸ್ಯಗಳು ಭದ್ರತೆಗಳ ಮಾಹಿತಿ ವೈರಿಗಳಿಗೆ ಸಿಗದಂತೆ ಕಾಪಾಡುವುದು ಅತ್ಯವಶ್ಯ. ಈಗ ಇದು ಪುನಃ ಆ್ಯಕ್ಟೀವ್ ಆಗಿರುವುದು ಮತ್ತೆ ಆತಂಕ ಸೃಷ್ಟಿಸಿದೆ.