ಕಂಗನಾ v/s ಜಾವೇದ್‌ ಅಖ್ತರ್‌: ಹೃತಿಕ್‌ ರೋಷನ್‌ ಜತೆಗಿನ ಸಂಬಂಧದಿಂದ ಬಂಧನದ ಭೀತಿಯವರೆಗೆ...

kangana
Published on

ನವದೆಹಲಿ: ಭಾರತದ ಬಲಪಂಥೀಯರನ್ನು ತಾಲಿಬಾನಿಗಳಿಗೆ ಹೋಲಿಸಿ ಒಂದೆಡೆ ಬಾಲಿವುಡ್​ ರಚನಾಕಾರ ಮತ್ತು ಕವಿ ಜಾವೇದ್​ ಅಖ್ತರ್‌ ವಿವಾದಕ್ಕೆ ಸಿಲುಕಿದ್ದರೆ ಅದೇ ಇನ್ನೊಂದೆಡೆ, ಅವರು ಬಿಜೆಪಿ ಪರವಾಗಿ ಹೇಳಿಕೆ ನೀಡುತ್ತಿರುವ ನಟಿ ಕಂಗನಾ ರಣಾವತ್‌ ವಿರುದ್ಧ ಸಮರ ಸಾರಿದ್ದಾರೆ.

ಕಂಗನಾ ರಣಾವತ್‌ ಮತ್ತು ನಟ ಹೃತಿಕ್‌ ರೋಷನ್‌ ಒಂದು ಕಾಲದಲ್ಲಿ ಬಹಳ ಸ್ನೇಹಿತರಾಗಿದ್ದು, ಇವರನ್ನು ಪ್ರೇಮ ಬಂಧನಕ್ಕೆ ಸಿಲುಕಿಸಿತ್ತು. ಹೃತಿಕ್‌ ಮದುವೆಯಾಗಿದ್ದರೂ ಕೂಡ ಕಂಗನಾ ಜತೆಯಲ್ಲಿ ಸ್ನೇಹ ಮುಂದುವರೆಸಿದ್ದರು ಎಂಬ ಆರೋಪವಿದೆ. ತಮ್ಮಿಬ್ಬರ ಸ್ನೇಹದ ಬಗ್ಗೆ ಖುದ್ದು ಕಂಗನಾರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

ಈ ನಡುವೆ ತಮ್ಮಿಬ್ಬರ ಮಧ್ಯೆ ಜಾವೇದ್‌ ಅಖ್ತರ್‌ ಪ್ರವೇಶವಾಗಿದ್ದು, ಹೃತಿಕ್ ರೋಷನ್‌ನನ್ನು ಪ್ರೀತಿಸುತ್ತಿರುವ ವಿಷಯವನ್ನು ಎಲ್ಲಿಯೂ ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದರು ಎಂದು ಕಂಗನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ತಾವು ಈ ರೀತಿ ಮಾಡಿಯೇ ಇಲ್ಲ, ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದಿದ್ದ ಜಾವೇದ್‌ ಅಖ್ತರ್‌ ಕಂಗನಾ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.

ಈ ಕೇಸ್‌ಗೆ ಸಂಬಂಧಿಸಿದಂತೆ ಈ ಹಿಂದೆ ಹಲವಾರು ಬಾರಿ ಕೋರ್ಟ್‌ನಲ್ಲಿ ವಿಚಾರಣೆ ಬಂದರೂ ನಟಿ ಹಾಜರು ಆಗಿರಲಿಲ್ಲ. ಈಕೆ ಬೇಕಂತಲೇ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವುದಾಗಿ ಜಾವೇದ್‌ ಪರ ವಕೀಲರು ಆರೋಪಿಸಿದ್ದು, ಆಕೆಯ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಲು ಆದೇಶಿಸುವಂತೆ ಕೋರ್ಟ್‌ ಅನ್ನು ಕೋರಿದ್ದಾರೆ.

ನಟಿಯ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್‌, ‘ಕಳೆದ 8 ಬಾರಿ ವಿಚಾರಣೆಗೆ ನಟಿ ಹಾಜರು ಆಗಲಿಲ್ಲ. ಇದೇ ಕೊನೆ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರು ಇಲ್ಲದೇ ಹೋದರೆ ಬಂಧನ ವಾರೆಂಟ್‌ ಹೊರಡಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದೆ. ಇದೇ ವೇಳೆ ಕಂಗನಾ ಪರ ವಕೀಲರು ಕೋರ್ಟ್‌ಗೆ ಧಾವಿಸಿ ಕಂಗನಾ ಅವರು ಹಲವು ಕಡೆಗಳಲ್ಲಿ ಶೂಟಿಂಗ್‌ಗೆ ಹೋಗಿದ್ದ ಹಿನ್ನೆಲೆಯಲ್ಲಿ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿದೆ. ಆದ್ದರಿಂದ ಬರಲು ಸಾಧ್ಯವಾಗಲಿಲ್ಲ ಎಂದರು. ಅವರಿಗೆ ಕೋವಿಡ್ ಪರೀಕ್ಷೆ ನಡೆಸಿ ವರದಿ ಪಾಸಿಟಿವ್​ ಬಂದಲ್ಲಿ ಅದನ್ನು ಕೋರ್ಟ್​ಗೆ ಸಲ್ಲಿಸುವುದಾಗಿ ವಕೀಲರು ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನು ಇದೇ 20ಕ್ಕೆ ನಿಗೆದಿ ಮಾಡಿರುವ ಕೋರ್ಟ್‌ ಒಂದೇ ನಟಿ ಹಾಜರು ಇರಬೇಕು, ಇಲ್ಲವೇ ರಿಪೋರ್ಟ್‌ ತರಬೇಕು ಎಂದಿದ್ದಾರೆ. ಒಟ್ಟಿನಲ್ಲಿ ನಟಿ ಕಂಗನಾ ಅವರಿಗೆ ಬಂಧನದ ಭೀತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net