ಹೊಸ ಲವರ್​ಗೆ ಗ್ರಹಚಾರ ತಂದಿಟ್ಟ ಪ್ರೇಯಸಿ- ಸಾಗರದ ಡಬಲ್​ ಮರ್ಡರ್​ ಕೇಸ್​ ಭೇದಿಸಿದ ಪೊಲೀಸರು!

murder
Published on

ಶಿವಮೊಗ್ಗ: ಇದೇ 11ನೇ ತಾರೀಖು ಸಾಗರ ತಾಲೂಕಿನ ಹಳೆ ಇಕ್ಕೇರಿಯಲ್ಲಿ ತಾಯಿ-ಮಗನ ಕೊಲೆ ನಡೆದಿತ್ತು. ಕೂಲಿ ಮಾಡಿಕೊಂಡು ಬದುಕುತ್ತಿದ್ದ ಬಂಗಾರಮ್ಮ (60), ಪ್ರವೀಣ್ (35) ಎಂಬುವವರನ್ನು ಮಲಗಿರುವ ಸಮಯದಲ್ಲಿಯೇ ಕೊಲೆ ಮಾಡಲಾಗಿತ್ತು.

ಈ ಕೊಲೆ ಮಾಡಿದ್ದು ಏಕೆ ಎನ್ನುವುದು ಮಾತ್ರ ಬಹಳ ನಿಗೂಢವಾಗಿಯೇ ಉಳಿದಿತ್ತು. ಇದಕ್ಕೆ ಕಾರಣ, ಇವರ ಬಳಿ ಹಣವೂ ಇರಲಿಲ್ಲ, ಮಾತ್ರವಲ್ಲದೇ ಮನೆಯಿಂದ ಯಾವ ವಸ್ತುವೂ ಕಳುವಾಗಿರಲಿಲ್ಲ. ದ್ವೇಷಕ್ಕಾಗಿ ಕೊಲೆ ನಡೆದಿದ್ದೇ ಆಗಿದ್ದರೆ, ಮನೆಯಲ್ಲಿಯೇ ಪ್ರವೀಣನ ಪತ್ನಿ ಹಾಗೂ ಆತನ ಮಗುವೂ ಅದೇ ಸಮಯದಲ್ಲಿ ಇದ್ದರು. ಅವರಿಗೆ ಏನೂ ಹಾನಿ ಮಾಡಿರಲಿಲ್ಲ. ಇವೆಲ್ಲವೂ ಒಂದು ರೀತಿಯಲ್ಲಿ ನಿಗೂಢವಾಗಿಯೇ ಕಂಡಿತ್ತು.

ಇದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಅವರು ವಿಶೇಷ ಪೊಲೀಸ್ ತಂಡ ರಚಿಸಿದ್ದರು. ಮೇಲ್ನೋಟಕ್ಕೆ ಇಲ್ಲಿ ಬದುಕಿದ್ದುದು ಪ್ರವೀಣ್​ ಪತ್ನಿ ಮತ್ತು ಮಗು. ಹಾಗಿದ್ದರೆ ಪ್ರವೀಣ್​ ಪತ್ನಿ ರೋಹಿಣಿಯೇ ಏನಾದರೂ ಮಾಡಿಸಿರಬಹುದೇ ಎಂಬ ಗುಮಾನಿ ಪೊಲೀಸರಿಗೆ ಬಂದಿತ್ತು.

ಆದರೆ ಈ ಕುರಿತು ತನಿಖೆ ಕೈಗೊಂಡಾಗ ಅಂಥದ್ದೇನೂ ಇಲ್ಲ ಎನ್ನುವುದು ಪೊಲೀಸರಿಗೆ ತಿಳಿಯಿತು. ಆದ್ದರಿಂದ ಈ ಕೇಸ್​ ಇನ್ನೂ ನಿಗೂಢವಾಗಿಯೇ ಉಳಿದಿತ್ತು. ಇವರೂ ಅಲ್ಲ, ಅವರೂ ಅಲ್ಲ... ಇನ್ಯಾರು ಎಂದು ತಿಳಿಯುವುದಕ್ಕಾಗಿ ಪೊಲೀಸರು ಪ್ರಯತ್ನಿಸಿದರು.

ಅಂತೂ ಜೋಡಿ ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಗಿದ್ದೇನು? ಪೊಲೀಸರಿಗೆ ಇದೀಗ ತಿಳಿದುಬಂದಿರುವ ಮಾಹಿತಿ ಏನೆಂದರೆ, ಕೊಲೆಯಾದ ಪ್ರವೀಣ್​ಮದುವೆಯಾಗುವುದಕ್ಕಿಂತ ಮುಂಚೆ ಪಕ್ಕದ ಮನೆಯ ಶೃತಿ ಎಂಬಾಕೆಯ ಜತೆ ಪ್ರೇಮವ್ಯವಹಾರ ನಡೆಸಿದ್ದ. ತಾವು ಖಾಸಗಿಯಾಗಿ ಇರುವ ಕೆಲವೊಂದು ಘಟನೆಗಳ ವಿಡಿಯೋ ಕೂಡ ಮಾಡಿಟ್ಟುಕೊಂಡಿದ್ದ. ಆದರೆ ಅಕೆಯನ್ನು ಮದುವೆಯಾಗದೇ ರೋಹಿಣಿಯನ್ನು ಮದುವೆಯಾಗಿದ್ದ. ಆದರೆ ವಿಡಿಯೋ ತೋರಿಸಿ ಶೃತಿಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ.

ಇದು ಶೃತಿಗೆ ಸಹಿಸಲು ಸಾಧ್ಯವಾಗಿರಲಿಲ್ಲ. ಇದೆ ವೇಳೆ ಶೃತಿ ಭರತ್ ಎಂಬ ಯುವಕನ ಪ್ರೇಮಪಾಶಕ್ಕೆ ಬಿದ್ದಿದ್ದಾಳೆ. ಮಾಜಿ ಲವರ್​ ಪ್ರವೀಣನ ಮೇಲೆ ಸೇಡು ತೀರಿಸಿಕೊಳ್ಳಲು ಈಕೆ ಹಾಲಿ ಪ್ರಿಯಕರ ಭರತ್​ನ ನೆರವು ಕೋರಿದ್ದಾಳೆ. ಪ್ರಿಯತಮೆಯ ಮಾತಿಗೆ ಒಲ್ಲೆ ಎನ್ನದ ಭರತ್​ ಹೊಂಚು ಹಾಕಿ ಪ್ರವೀಣ್ ಹಾಗೂ ಆತನ ತಾಯಿ ಬಂಗಾರಮ್ಮನ ಕೊಲೆ ಮಾಡಿದ್ದಾನೆ.

ಈ ವಿಷಯ ಪೊಲೀಸರಿಗೆ ತಿಳಿದಿದೆ ಎಂದು ಗೊತ್ತಾಗುತ್ತಲೇ ಭರತ್​ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ನಂತರ ಆತನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶೃತಿ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net