

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕಣವಾಗಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯಲ್ಲಿ (ಆರ್,ಆರ್.ನಗರ) ಈ ಹಿಂದೆ ಬೃಹತ್ ಅಕ್ರಮದ ಕುರಿತು ಸುದ್ದಿ ಸುಳಿದಾಡುತ್ತಿತ್ತು. ಈಗ ಮತ್ತೆ ಅಕ್ರಮದ ಘಾಟು ಹೊಡೆಯುತ್ತಿದೆ.
ಈ ಕುರಿತು ಕ್ಷೇತ್ರದ ಮತದಾರರಿಂದ ಚುನಾವಣಾಧಿಕಾರಿಗಳಿಗೆ ದೂರುಗಳು ಬರುತ್ತಿವೆಯಂತೆ. ಕ್ಷೇತ್ರದ ಮತದಾರರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ನಿಮ್ಮ ವೋಟರ್ ಐಡಿ ಹಾಗೂ ಮೊಬೈಲ್ ಸಂಖ್ಯೆ ನೀಡುವಂತೆ ಒತ್ತಾಯಿಸುತ್ತಿರುವುದಾಗಿ ದೂರುಗಳು ದಾಖಲಾಗಿವೆ.
ಈ ಮೊದಲು ನಡೆದಿದ್ದ ವಿಧಾನಸಭಾ ಚುನಾವಣೆ ವೇಳೆ ಅಕ್ರಮ ವೋಟರ್ ಐಡಿ ಕಾರ್ಡ್ ಜಾಲದ ಕುರಿತು ಭಾರಿ ಸುದ್ದಿಯಾಗಿತ್ತು. ಈ ಪ್ರಕರಣ ನಂತರ ಸುಪ್ರೀಂಕೋರ್ಟ್ ಬಾಗಿಲಿಗೂ ಹೋಗಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ವಿರುದ್ಧ ಆಗ ಆರೋಪ ಕೇಳಿಬಂದಿತ್ತು. ಆದರೆ ವಿಚಾರಣೆ ನಡೆಸಿದ್ದ ಕೋರ್ಟ್, ಈ ಅಕ್ರಮದಲ್ಲಿ ಮುನಿರತ್ನ ಅವರ ಪಾತ್ರವಿಲ್ಲ ಎಂದು ಹೇಳುವ ಮೂಲಕ, ಅವರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು.
ಆದರೆ ಬರುವ ನವೆಂಬರ್ 3ರಂದು ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ಮತ್ತದೇ ಆರೋಪಗಳು ಕೇಳಿಬರುತ್ತಿವೆ. ಆದರೆ ಈ ಬಾರಿ ಯಾರಿಂದ ಕರೆ ಬಂದಿದೆ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಮತದಾರರು ಮಾತ್ರ ಕರೆಗಳಿಂದ ಬೇಸತ್ತು ಚುನಾವಣಾಧಿಕಾರಿಗಳಿಗೆ ದೂರು ದಾಖಲು ಮಾಡುತ್ತಿದ್ದಾರೆ.
ಈ ದೂರಿನ ಕುರಿತಂತೆ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಅವರು ಮಾತನಾಡಿ, ಅಪರಿಚಿತರು ಕರೆ ಮಾಡಿ ತಮ್ಮ ವೋಟರ್ ಐಡಿ ನಂಬರ್ ಹಾಗೂ ಮೊಬೈಲ್ ಸಂಖ್ಯೆ ಕೇಳುತ್ತಿದ್ದಾರೆ ಎಂಬುದಾಗಿ ಆರ್ಆರ್ನಗರ ಕ್ಷೇತ್ರದ ಮತದಾರರು ದೂರು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೇರೆಯವರ ವೋಟರ್ ಐ.ಡಿ. ಮಾಹಿತಿ ಕೇಳುವುದು ಅಪರಾಧ. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಲಾಗಿದೆ. ಆರ್.ಆರ್. ನಗರದಲ್ಲಿ ಹಲವು ವರ್ಷಗಳಿಂದ ಅಧಿಕಾರಿಗಳು ಒಂದೇ ಜಾಗದಲ್ಲಿರುವ ಮಾಹಿತಿ ಇದೆ. ಹೀಗಾಗಿ ಕೆಲವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಂಜುನಾಥ್ ಪ್ರಸಾದ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.