

ಮೈಸೂರು: ಶಾಲೆಯಲ್ಲಿ ನಡೆಯುತ್ತಿರುವ ಲೈಂಗಿಕ ಹಿಂಸೆ, ಅಕ್ರಮ, ನಡೆದಿರುವ ಕೊಲೆಗಳ ಕುರಿತು ಹೊರಗಡೆ ತಿಳಿಸಿದ್ದಾರೆ ಎನ್ನುವ ಕಾರಣಕ್ಕೆ ಕಾನ್ವೆಂಟ್ ಒಂದರ ಕ್ರೈಸ್ತ ಸನ್ಯಾಸಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಆತಂಕದ ಘಟನೆ ಮೈಸೂರಿನಲ್ಲಿ ನಡೆದಿದೆ.
ತಮಗೆ ಜೀವ ಬೆದರಿಕೆ ಇರುವ ಕುರಿತು ಮೈಸೂರಿನ ಅಶೋಕಪುರದ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ ಎಂಬಿ ಎಲ್ಸೀನಾ. ನನಗೆ ಶಾಲೆಯ ಆಡಳಿತ ಮಂಡಳಿಯಿಂದಲೇ ಕೊಲೆ ಬೆದರಿಕೆ ಇದೆ, ನನ್ನ ಮೇಲೆ ಹಲ್ಲೆ ಮಾಡಿ ಹಿಂಸೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ವಿಡಿಯೋ ಕೂಡ ಮಾಡಿದ್ದಾರೆ ಅವರು.
ಎಂಬಿ ಎಲ್ಸೀನಾ ಅವರು ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಮರ್ಸಿ ಕಾನ್ವೆಂಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ. 'ಸಂಸ್ಥೆಯಲ್ಲಿ ನಡೆಯುತ್ತಿರುವ ಹಲವಾರು ರೀತಿಯ ಅಕ್ರಮ, ಲೈಂಗಿಕ ಹಿಂಸೆ ಮಾತ್ರವಲ್ಲದೇ ನಡೆದಿರುವ ಎರಡು ಕೊಲೆಗಳನ್ನು ನಾನು ನೋಡಿದ್ದೇನೆ. ಇದನ್ನು ಸಹಿಸದ ನಾನು ಎಲ್ಲಾ ವಿಷಯಗಳನ್ನು ಹೊರಗಡೆ ತಿಳಿಸಿದ್ದೇನೆ ಎನ್ನುವ ಕಾರಣಕ್ಕೆ ಆಡಳಿತ ಮಂಡಳಿಯಿಂದ ಕೊಲೆ ಬೆದರಿಕೆ ಬರುತ್ತಿದೆ' ಎಂದು ದೂರಿನಲ್ಲಿ ಅವರು ಹೇಳಿದ್ದಾರೆ.
ನನ್ನನ್ನು ಅವರು ಯಾವತ್ತಾದರೂ ಕೊಲೆ ಮಾಡಬಹುದು. ನನ್ನ ಸಾವು ಸಂಭವಿಸಿದರೆ ಅದಕ್ಕೆ ಕಾರಣ ಇದೇ ಸಂಸ್ಥೆ. ನಾನು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವಳು ಅಲ್ಲ. ಆದ್ದರಿಂದ ನನ್ನ ಸಾವು ಯಾವತ್ತಿಗೂ ಆತ್ಮಹತ್ಯೆಯಾಗಲಾರದು. ಒಂದು ವೇಳೆ ನಾನು ಸತ್ತರೆ ಅದಕ್ಕೆ ಈ ಆಡಳಿತ ಮಂಡಳಿಯಿಂದ ನಡೆದಿರುವ ಕೊಲೆಯೇ ಕಾರಣ. ಈ ವಿಚಾರಗಳನ್ನು ಮನಗಂಡು ಪೊಲೀಸರು ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಹೇಳಿಕೆಯ ನಂತರ ನನ್ನನ್ನು ಒತ್ತಾಯಪೂರ್ವಕವಾಗಿ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಮಹಿಳಾ ಆಯೋಗದಲ್ಲಿಯೂ ದೂರು ದಾಖಲಿಸಿದ್ದೇನೆ ಎಂದಿದ್ದಾರೆ. ಸದ್ಯ ಸಿಸ್ಟರ್ ಅವರ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.