

ಬೆಂಗಳೂರು: ಕರೊನಾ ನಿಯಂತ್ರಕ್ಕಾಗಿ ಸರ್ಕಾರ ಲಾಕ್ ಡೌನ್ ಮುಂದುವರೆಸುತ್ತಿರುವುದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತಿದೆಯೇ? ವಾರಾಂತ್ಯದಲ್ಲಿ ನಗರದ ಮಾರುಕಟ್ಟೆಗಳಲ್ಲಿ ಜಮಾವಣೆಯಾಗುತ್ತಿರುವ ಜನಸಾಗರ ದೃಶ್ಯ ಹೌದೌದು ಎನ್ನುವಂತಿದೆ. ಇಂದು ಬಿಟ್ಟರೆ ಮುಂದೆ ಯಾವತ್ತೂ ಸಿಗುವುದಿಲ್ಲವೇನೋ ಎಂಬಂತೆ ಕೋಳಿ, ಮಾಂಸದ ಅಂಗಡಿ ಸೇರಿ ಮಾರುಕಟ್ಟೆಗಳಲ್ಲಿ ಜನಸಂದಣಿ ಏರ್ಪಡುತ್ತಿದೆ.
ಅರೆಬರೆ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ನಿಯಮ ಗಾಳಿಗೆ ತೂರಿ ಜಾತ್ರೆಗೆ ಸೇರುವಂತೆ ಜನ ಜಮಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಒಂದೇ ಬಾರಿ ಅದಷ್ಟೂ ವಾಹನಗಳು ರಸ್ತೆಗಿಳಿಯುತ್ತಿದ್ದು ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅವಕಾಶ ಕೊಟ್ಟಿರುವ ನಾಲ್ಕೇ ಗಂಟೆಗಳಲ್ಲಿ ವಾರಕ್ಕಾಗುವಷ್ಟು ಕರೊನಾ ಹರಡಿಸಲಾಗುತ್ತಿದೆ. ರೋಗಲಕ್ಷಣವಿಲ್ಲದ ಸೋಂಕಿತರು, ಹೋಂಐಸೋಲೇಷನ್ ನಲ್ಲಿರುವ ಸೋಂಕಿತರರು ಈ ಜನಜಂಗುಳಿಯಲ್ಲಿ ಜಮಾವಣೆಯಾಗುತ್ತಿದ್ದು ಕರೊನಾ ಉಲ್ಭಣಕ್ಕೆ ಕಾರಣವಾಗುತ್ತಿದ್ದಾರೆ. ಇದು ಪ್ರತಿ ವಾರಾಂತ್ಯದಲ್ಲಿ ಕಂಡುಬರುವ ದೃಶ್ಯವಾಗಿದೆ. ಇದೇ ಪುನಾವರ್ತನೆಯಾದರೆ ಎಷ್ಟೇ ದಿನ ಲಾಕ್ ಡೌನ್ ಮುಂದುವರೆಸಿದರೂ ಕರೊನಾ ಕಂಟ್ರೋಲಿಗೆ ಬರುವುದು ಅನುಮಾನ. ಶುದ್ಧ ಅನುಮಾನ.
ಪೊಲೀಸರ ಸುಳಿವಿಲ್ಲ:
ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿಕೊಂಡು ತಪಾಸಣೆ ನಡೆಸಿ ವಾಹನ ಜಪ್ತಿ ಮಾಡುವುದರಲ್ಲೇ ಬಿಜಿಯಾಗಿರುವ ಪೊಲೀಸರು ಇಂಥ ಜಾಗಗಳತ್ತ ಸುಳಿಯುತ್ತಿಲ್ಲ. ಬಿಬಿಎಂಪಿಗೆ ಹೊಸದಾಗಿ ಸೇರಿದ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಕರೊನಾ ಉಲ್ಭಣಕ್ಕೆ ಇದೇ ಪ್ರಮುಖ ಕಾರಣವಾಗುತ್ತಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ.