

ಮೈಸೂರು: ಪೊಲೀಸರು ಅರೆಸ್ಟ್ ಮಾಡುತ್ತಾರೆಂಬ ಭೀತಿಯಿಂದ ಕೊಲೆ ಆರೋಪಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ನಂಜನಗೂಡಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕಿತ್ಸೆ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹದೇವಸ್ವಾಮಿ ಅಲಿಯಾಸ್ ಜೀಪ್ ಕುಳ್ಳ ಬಂಧಿತ ಆರೋಪಿ. ಜವರನಾಯ್ಕ ಎಂಬುವವರನ್ನು ಕೊಂದ ಆರೋಪದ ಮೇಲೆ ಮಹದೇವಸ್ವಾಮಿ ಅರೆಸ್ಟ್ ಆಗಿದ್ದಾನೆ.
ಜೂನ್ 14 ರಂದು ಹುಲ್ಲಹಳ್ಳಿಯ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಇರುವ ವಾಟರ್ ಟ್ಯಾಂಕ್ ಸಮೀಪ ಜವರನಾಯ್ಕ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಮುಖವನ್ನು ಕಲ್ಲಿನಿಂದ ಜಜ್ಜಲಾಗಿತ್ತು. ಗಾಯಗೊಂಡ ಜವರನಾಯ್ಕನನ್ನ ಹುಲ್ಲಹಳ್ಳಿ ಠಾಣೆ ಪೊಲೀಸರು ಮೈಸೂರಿನ ಕೆ.ಆರ್.ಅಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಬದುಕಲಿಲ್ಲ.
ಘಟನೆಗೆ ಸಂಬಂಧಿಸಿದಂತೆ ಮಹದೇವಸ್ವಾಮಿಯನ್ನು ಪೊಲೀಸರು ಹುಡುಕಲು ಆರಂಭಿಸಿದ್ದರು. ತನ್ನನ್ನು ಬಂಧಿಸುತ್ತಾರೆ ಎನ್ನುವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. (ದಿಗ್ವಿಜಯ ನ್ಯೂಸ್)