ಐರ್ಲೆಂಡ್ ವಿರುದ್ಧ ಟಿ-20 ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ: ಮಳೆರಾಯನ ಅಡ್ಡಿಯ ನಡುವೆ ನಡೆಯಿತು ಆಟ

ಕ್ರಿಕೆಟ್
Published on

ಡಬ್ಲಿನ್ ​(ಐರ್ಲೆಂಡ್): ಐರ್ಲೆಂಡ್ ವಿರುದ್ಧ ಟಿ-20 ಪಂದ್ಯದಲ್ಲಿ ಭಾರತವು ಏಳು ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಅಂತಾರಾಷ್ಟ್ರೀಯ ತಂಡದ ನಾಯಕತ್ವವನ್ನು ಮೊದಲ ಬಾರಿ ವಹಿಸಿಕೊಂಡಿದ್ದ ಹಾರ್ದಿಕ್​ ಪಾಂಡ್ಯ ನೇತೃತ್ವದ ತಂಡದಲ್ಲಿ ಈ ಗೆಲುವು ಸಿಕ್ಕಿದೆ.

ಮಳೆರಾಯನ ಅಡ್ಡಿಯಿಂದ 12 ಓವರ್​ಗಳಿಗೆ ನಿಗದಿಯಾದ ಈ ಪಂದ್ಯದಲ್ಲಿ ಐರ್ಲೆಂಡ್​ ತಂಡ ಕೇವಲ 4 ವಿಕೆಟ್​ಗಳನ್ನು ಕಳೆದುಕೊಂಡು 108 ರನ್​ಗಳನ್ನು ಗಳಿಸಿತ್ತು. ಐರ್ಲೆಂಡ್​ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತ 9.2 ಓವರ್​ಗಳಿಗೆ 3 ವಿಕೆಟ್​ಗಳನ್ನು ಕಳೆದುಕೊಂಡು 111 ರನ್​ಗಳನ್ನು ಕಲೆ ಹಾಕಿ ಜಯ ಸಾಧಿಸಿತು.

ಭಾರತ ತಂಡದ ಪರ ಆರಂಭಿಕ ಆಟಗಾರ ಇಶಾನ್ ಕಿಶನ್ ಔಟಾಗದೇ 47 ರನ್ ಗಳಿಸಿದರು. ದೀಪಕ್ ಹೂಡಾ 26 ರನ್​, ಸೂರ್ಯಕುಮಾರ್ ಯಾದವ್ 0, ನಾಯಕ ಹಾರ್ದಿಕ್ ಪಾಂಡ್ಯ 24 ಮತ್ತು ದಿನೇಶ್ ಕಾರ್ತಿಕ್ 4 ರನ್​ಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದರು. ಐರ್ಲೆಂಡ್​ ತಂಡದ ಪರ ಕ್ರೇಗ್ ಯಂಗ್ 2 ವಿಕೆಟ್​ ಪಡೆದರೆ, ಜೋಶುವಾ ಲಿಟಲ್ 1 ವಿಕೆಟ್​ ಪಡೆದರು.

ಭಾರತ ತಂಡ ಪರ ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್​ ಪಡೆಯುವ ಮೂಲಕ ಐರ್ಲೆಂಡ್​ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.

ಟಾಸ್​ ಸೋತು ಮೊದಲ ಬ್ಯಾಟಿಂಗ್​ ಆರಂಭಿಸಿತ್ತು ಐರ್ಲೆಂಡ್ ತಂಡ. ತಂಡದ ಪರ ಪಾಲ್ ಸ್ಟಿರ್ಲಿಂಗ್ 4 ರನ್​, ನಾಯಕ ಆಂಡ್ರ್ಯೂ ಬಾಲ್ಬಿರ್ನಿ 0, ಗರೆಥ್ ಡೆಲಾನಿ 8 ರನ್​, ಲೋರ್ಕನ್ ಟಕರ್ 18 ರನ್​ ಗಳಿಸಿ ಔಟಾದರು. ಹ್ಯಾರಿ ಟೆಕ್ಟರ್ ಔಟಾಗದೇ 33 ಎಸೆತಗಳಲ್ಲಿ 64 ರನ್​ಗಳಿಸಿದರೆ, 4 ರನ್​ಗಳಿಸಿದ ಜಾರ್ಜ್ ಡಾಕ್ರೆಲ್ ಅಜೇಯರಾಗಿ ಉಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net