

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 2020ನೇ ಸಾಲಿನ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದರಲ್ಲಿ ಅವರು ಅನೇಕ ವಿಷಯಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಇಂದು ಮೋದಿಯವರು ಕರ್ನಾಟಕದ ಬಗ್ಗೆಯೂ ಶ್ಲಾಘನೆ ವ್ಯಕ್ತಪಡಿಸಿದರು. ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಾ ಬ್ರಿಗೇಡ್ ತಂಡಕ್ಕೆ ಪ್ರಧಾನಿಯವರು ಅಭಿನಂದನೆ ಸಲ್ಲಿಸಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಯುವಾ ಬ್ರಿಗೇಡ್ ತಂಡ ಜೀರ್ಣೋದ್ಧಾರ ಕಾರ್ಯ ನಡೆಸಿತ್ತು. ಶಿಥಿಲಗೊಂಡಿದ್ದ, ಅವ್ಯವಸ್ಥೆಯ ಗೂಡಾಗಿದ್ದ ಐತಿಹಾಸಿಕ ವೀರಭದ್ರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಾಡಿತ್ತು. ಸುಮಾರು ಎರಡು ತಿಂಗಳ ಕಾಲ ಇಲ್ಲಿಯೇ ನೆಲೆಸಿದ್ದ ತಂಡ, ಅತ್ಯಂತ ಶ್ರಮವಹಿಸಿ ಈ ಕಾರ್ಯ ನಡೆಸಿತ್ತು.
ಈ ಜೀರ್ಣೋದ್ಧಾರ ಕಾಮಗಾರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿದ್ದವು. ಈಗಲೂ ಈ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಲೇ ಇದೆ.
ಈ ಕಾರ್ಯ ಪ್ರಧಾನಿ ನರೇಂದ್ರ ಮೋದಿಯವರ ಗಮನವನ್ನೂ ಸೆಳೆದಿದ್ದು, ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಂಡಕ್ಕೆ ಅಭಿನಂದಿಸಿದ್ದಾರೆ. ಇಚ್ಛಾಶಕ್ತಿ, ಬದ್ಧತೆ ಇದ್ದಲ್ಲಿ ಯಾವುದನ್ನೂ ಸಾಧಿಸಬಹುದು ಎಂಬುದಕ್ಕೆ ಯುವಾ ಬ್ರಿಗೇಡ್ ತಂಡ ಉದಾಹರಣೆ ಎಂದು ಹೇಳಿದ್ದಾರೆ.
ಸಾಧಿಸುವ ಛಲ, ಚೈತನ್ಯ, ಮಾಡಬೇಕೆಂಬ ಹುಮ್ಮಸ್ಸು ಕಂಡಾಗ ದೇಶದ ಯುವಕರ ಬಗ್ಗೆ ಸಂತೋಷ ಮತ್ತು ಭರವಸೆ" ಮೂಡುತ್ತದೆ, ಇಂತಹ ಇಚ್ಛಾಶಕ್ತಿ ಹೊಂದಿದ ಯುವಕರಿಗೆ ಯಾವುದೂ ಸಹ ದೊಡ್ಡ ಸವಾಲಲ್ಲ ಹಾಗೂ ಅಂತಹ ಯುವ ಶಕ್ತಿಗೆ ಯಾವುದೂ ಅಸಾಧ್ಯವಲ್ಲ ಎಂದು ಪ್ರಧಾನಿ ಅಭಿಪ್ರಾಯ ಪಟ್ಟಿದ್ದಾರೆ.