

ಹಾಸನ: ಬೆಂಗಳೂರಿನಿಂದ ಹಾಸನಕ್ಕೆ ಬಂದಿದ್ದ ಇಬ್ಬರು ಯುವಕರು, ಆಕಸ್ಮಿಕವಾಗಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಹಾಸನ ನಗರದ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ.
ಇವರು ಕೂಲಿ ಕೆಲಸಕ್ಕೆಂದು ಹಾಸನಕ್ಕೆ ಬಂದಿದ್ದರು ಎನ್ನಲಾಗಿದೆ.
ಬೆಂಗಳೂರು ಮೂಲದ ನವೀನ್ ಹಾಗೂ ಮತ್ತೊಬ್ಬ ಯುವಕ ಗೂಡ್ಸ್ ರೈಲಿಗೆ ಸಿಲುಕಿ ಸಾವನ್ನಪ್ಪಿದ ದುರ್ದೈವಿಗಳು. ಇನ್ನು ಮೃತರು ಕೂಲಿ ಕೆಲಸಕ್ಕೆಂದು ಬೆಂಗಳೂರಿನಿಂದ ಹಾಸನಕ್ಕೆ ರೈಲಿನಲ್ಲಿ ಬಂದಿದ್ದಾರೆ. ರೈಲಿನಿಂದ ಇಳಿದ ಯುವಕರು ರೈಲ್ವೆ ಟ್ರ್ಯಾಕ್ ಮೇಲೆ ನಿಂತಿದ್ದಾರೆ.
ಈ ವೇಳೆ ಗೂಡ್ಸ್ ರೈಲು ಬರುತ್ತಿರುವುದನ್ನು ಅರಿಯದ ಯುವಕರಿಗೆ, ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮದಿಂದಾಗಿ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನವೀನ್ ಎಂಬಾತನ ಆಧಾರ್ ಕಾರ್ಡ್ ಸಿಕ್ಕಿದ್ದು ವಿವರ ಪತ್ತೆಯಾಗಿದೆ.
ಸ್ಥಳಕ್ಕೆ ಹಾಸನ ನಗರದ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.