

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ ಕೊಲೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಡಿಸೆಂಬರ್ 4ಕ್ಕೆ ಮುಂದೂಡಲಾಗಿದೆ.
ಈ ಹಿನ್ನೆಲೆಯಲ್ಲಿ ಇನ್ನೊಂದು ವಾರ ವಿನಯ್ ಅವರು ಜೈಲಿನಲ್ಲಿಯೇ ಕಾಲ ಕಳೆಯುವಂತಾಗಿದೆ.
2016ರ ಜೂನ್ 15ರಲ್ಲಿ ಉದಯ್ ಜಿಮ್ನಲ್ಲಿ ಯೋಗೀಶ್ ಗೌಡ ಬರ್ಬರವಾಗಿ ಹತ್ಯೆಯಾಗಿದ್ದರು. ಈ ಸಂಬಂಧ ಸಿಬಿಐ ವಿಚಾರಣೆ ಕೈಗೆತ್ತಿಗೊಂಡಾಗ ವಿನಯ್ ಕುಲಕರ್ಣಿ ಹೆಸರು ಕೇಳಿಬಂದಿತ್ತು. ರಾಜಕೀಯ ಪ್ರಭಾವ ಬಳಸಿ ಕೇಸು ಮುಚ್ಚಿ ಹಾಕಿರುವ ಆರೋಪ ಇವರ ಮೇಲಿದೆ.
ಕಳೆದ ತಿಂಗಳು ಧಾರವಾಡ ಕಲ್ಯಾಣ ನಗರದಲ್ಲಿನ ವಿನಯ್ ಕುಲಕರ್ಣಿ ಮನೆ ಮೇಲೆ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು. ತಮಗೆ ಜಾಮೀನು ನೀಡುವಂತೆ ಅವರು ಕೋರ್ಟ್ ಮೊರೆ ಹೋಗಿದ್ದಾರೆ.
ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅವರ ಪರ ವಕೀಲರು ವಾಪಸ್ ಪಡೆದಿದ್ದರು. ಇದೀಗ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿದೆ. ಇಂದು ಅರ್ಜಿ ವಿಚಾರಣೆಯ ಅವಧಿ ಮುಗಿದ ಹಿನ್ನೆಲೆ ಡಿಸೆಂಬರ 4ಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ಧಾರವಾಡದ ಮೂರನೇ ಹೆಚ್ಚುವರಿ ಸೆಷನ್ ಕೋರ್ಟ್ನಲ್ಲಿ ನ.23ರಂದು ವಿನಯ್ ಅವರ ನ್ಯಾಯಾಂಗ ಬಂಧನ ವಿಚಾರಣೆ ಇತ್ತು. ಈ ವೇಳೆ ಸಿಬಿಐ ಅಧಿಕಾರಿಗಳು ಕೋರ್ಟಿಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದರು. ಹೀಗಾಗಿ ಹಿಂಡಲಗಾ ಜೈಲಿನಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ವಿನಯ್ ವಿಚಾರಣೆಗೆ ಹಾಜರಾದರು.
ಇದರ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ಡಿಸೆಂಬರ್ 4ಕ್ಕೆ ಮುಂದೂಡಿದೆ. ಸದ್ಯ ಅವರು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.